ಪೆರ್ಲ: ದೇವಸ್ಥಾನದ ಅಭಿವೃದ್ಧಿಯಲ್ಲಿ ಭಕ್ತರು ಸಹನಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಮಲಬಾರ್ ದೇವಸ್ವಂ ಬೋರ್ಡ್ ನೀಲೇಶ್ವರ ಏರಿಯಾ ಸಮಿತಿ ಸದಸ್ಯ ಎ.ಕೆ.ಶಂಕರನ್ ತಿಳಿಸಿದರು.
ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ ನೇಮಕಗೊಂಡ ನೂತನ ಆಡಳಿತ ಸಮಿತಿ ವತಿಯಿಂದ ಶನಿವಾರ ನಡೆದ "ಹಿರಿಯರಿಗೆ ಗೌರವಾರ್ಪಣೆ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರತಿ ಚರಾಚರಗಳಿಗೂ ಏಳು-ಬೀಳುಗಳು ಸಹಜ. ಗ್ರಾಮದ ದೇವಾಲಯಗಳು ಉಚ್ಚ್ರಾಯತೆಗೆ ತಲುಪಿದಾಗ ನಾಡು ಸುಭಿಕ್ಷವಾಗುತ್ತದೆ. ಕಾಟುಕುಕ್ಕೆ ದೇವಳದ ನೂತನ ಚೇಯರ್ ಮೇನ್ ಪದ್ಮನಾಭ ಶೆಟ್ಟಿಯವರು ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಲಿ ಎಂದು ಅವರು ಹಾರೈಸಿದರು.
ಕಾಟುಕುಕ್ಕೆ ದೇವಳದ ಪ್ರಧಾನ ಅರ್ಚಕ ಮಧುಸೂದನ ಪುಣಿಂಚಿತ್ತಾಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾಟುಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಹೈಯರ್ ಸೆಕೆಂಡರಿ ಶಾಲೆ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಪ್ರಿನ್ಸಿಪಾಲರ ಜವಾಬ್ದಾರಿ ಹೆಚ್ಚಿದೆ. ಶಾಲೆಯನ್ನು ಸತತ ಶೇ.100 ಫಲಿತಾಂಶದೊಂದಿಗೆ ಮುನ್ನಡೆಸಿದ ಪದ್ಮನಾಭ ಶೆಟ್ಟಿಯವರು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮಂಡಳಿಯ ಚೇಯರ್ ಮೇನ್ ಆಗಿ ಆಯ್ಕೆಯಾಗಿದ್ದಾರೆ. ಅವರ ಅವಧಿಯಲ್ಲಿ ದೇವಸ್ಥಾನವನ್ನೂ ಅಭಿವೃದ್ಧಿ ಪಥದತ್ತ ಮುನ್ನಡೆಸಲಿ ಎಂದು ಹಾರೈಸಿದರು.
ದೇವಳದ ಮಾಜಿ ಅಧ್ಯಕ್ಷರುಗಳಾದ ಸಿ.ಸಂಜೀವ್ ರೈ ಕೆಂಗಣಾಜೆ, ಸಚ್ಚಿದಾನಂದ ಖಂಡೇರಿ ಭಂಡಾರದಮನೆ ಮತ್ತು ಕಾಟುಕುಕ್ಕೆ ಶಾಲೆ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಅವರನ್ನು ಹಾರ ಹಾಕಿ, ಶಾಲು ಹೊದೆಸಿ, ಹಣ್ಣು ಹಂಪಲು, ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ನೂತನ ಅಡಳಿತ ಮಂಡಳಿ ಚೇಯರ್ ಮೇನ್ ಪದ್ಮನಾಭ ಶೆಟ್ಟಿ, ಟ್ರಸ್ಟಿಗಳಾದ ನಾರಾಯಣನ್ ಕೆ. ಕಾಟುಕುಕ್ಕೆ, ಯೋಗೀಶ ಖಂಡೇರಿ, ನಾರಾಯಣ ಬಿ. ಬಾಳೆಮೂಲೆ, ಕೃಷ್ಣ ನಾಯ್ಕ್ ವಾಟೆಡ್ಕ ಅವರನ್ನು ಶಾಲು ಹಾಕಿ ಅಭಿನಂದಿಸಲಾಯಿತು.
ಕರ್ನಾಟಕ ರಾಜ್ಯ ಸರಕಾರದ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕಳ ಮಲಾರುಬೀಡು ಶುಭ ಹಾರೈಸಿದರು. ಸ್ವರ್ಗ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಟಿ.ವಾಸುದೇವ ಭಟ್ ("ಶಿವ" ಪಡ್ರೆ) ಹಳೆಯ ಆಡಳಿತ ಮಂಡಳಿಗೆ ಗೌರವ ಹಾಗೂ ಹೊಸ ಮಂಡಳಿಗೆ ಅಭಿನಂದನೆ ಸೂಚಿಸಿ ಸ್ವರಚಿತ ಅಶು ಕವಿತೆ ಹಾಡಿದರು.
ಅದ್ವೈತ್ ಕೃಷ್ಣ ಪ್ರಾರ್ಥನೆ ಹಾಡಿದರು. ದೇವಳದ ಚೇಯರ್ ಮೇನ್ ಪದ್ಮನಾಭ ಶೆಟ್ಟಿ ಚಕ್ಕಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಟ್ರಸ್ಟಿ ನಾರಾಯಣನ್ ಕೆ.ಕಾಟುಕುಕ್ಕೆ ವಂದಿಸಿದರು. ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ, ಶಿಕ್ಷಕಿ ವಾಣಿ ಜಿ.ಶೆಟ್ಟಿ ನಿರೂಪಿಸಿದರು. ಮಧ್ಯಾಹ್ನ ದೇವಳದಲ್ಲಿ ಕಾರ್ತಿಕ ಪೂಜೆ- ಸಮಾರಾಧನೆ ನೆರವೇರಿತು.




.jpg)
