ಕಾಸರಗೋಡು: ಗ್ರಾಮೀಣ ಪ್ರದೇಶಗಳು ಸೇರಿದಂತೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನ ಮತ್ತು ಡಿಜಿಟಲ್ ಸೇವೆಗಳನ್ನು ಒದಗಿಸಲು ಕೆ-ಸ್ಟೋರ್ ಯೋಜನೆಯನ್ನು ಸಕ್ರಿಯಗೊಳಿಸಲಾಗುವುದು ಎಂದು ಆಹಾರ, ಸಾರ್ವಜನಿಕ ವಿತರಣೆ, ಗ್ರಾಹಕ ವ್ಯವಹಾರಗಳು ಮತ್ತು ಲೀಗಲ್‍ಮೆಟ್ರಾಲಜಿ ಖಾತೆ ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ.
ಅವರು ಕಾಞಂಗಾಡ್‍ನ ಚೇಡಿ ರಸ್ತೆಯಲ್ಲಿ ಸಪ್ಲೈಕೊ ಮಾವೇಲಿ ಸೂಪರ್ ಸ್ಟೋರ್ ಉದ್ಘಾಟಿಸಿ ಮಾತನಾಡಿದರು. ಕೆ-ಸ್ಟೋರ್ ಮೂಲಕ ಅಡುಗೆ ಅನಿಲ, ಮಿಲ್ಮಾ ಮತ್ತು ಶಬರಿ ಉತ್ಪನ್ನಗಳು ಲಭ್ಯವಾಗಲಿದೆ. ಪ್ರಸಕ್ತ ರಾಜ್ಯದ 390 ಪಡಿತರ ಅಂಗಡಿಗಳಲ್ಲಿ 38 ಅಂಗಡಿಗಳನ್ನು ಹೆಚ್ಚು ಸ್ಮಾರ್ಟ್‍ಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆ ಅಂಗಡಿಗಳ ಸೇವೆಗಳನ್ನು ಹೆಚ್ಚಿನ ಪಡಿತರ ಅಂಗಡಿಗಳಿಗೆ ವಿಸ್ತರಿಸಲು ಸರ್ಕಾರ ಯೋಜನೆಹಮ್ಮಿಕೊಂಡಿದೆ.
ಪಡಿತರ ಅಂಗಡಿಗಳನ್ನು ಅವಲಂಬಿಸಿರುವ ಜನರ ಸಂಖ್ಯೆ ಹೆಚ್ಚುತ್ತಿದ್ದು, ಇದು ಗುಣಮಟ್ಟದ ಉತ್ಪನ್ನಗಳ ಮಾರಾಟವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.ಇತರ ಕೆಲವೊಂದು ರಾಜ್ಯಗಳಲ್ಲಿ ಪಡಿತರ ಅಂಗಡಿಗಳ ಸಂಖ್ಯೆ ಕಡಿತಗೊಳ್ಳುತ್ತಿದ್ದರೆ, ಕೇರಳವು ಅವುಗಳನ್ನು ಹೆಚ್ಚು ಜನಪ್ರಿಯಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ, ಕಳೆದ ನಾಲ್ಕು ವರ್ಷಗಳಲ್ಲಿ 34,969 ಹೊಸ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಸಪ್ಲೈಕೋ ಮೂಲಕ ಲಭ್ಯವಿರುವ ಹದಿಮೂರು ಉತ್ಪನ್ನಗಳನ್ನು ಕಡಿಮೆ ಬೆಲೆಗೆ, ಗುಣಮಟ್ಟದ ಸಾಮಗ್ರಿ ಪೂರೈಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಓಣಂ ಹಬ್ಬದ ಸಂದರ್ಭ ಸರ್ಕಾರಿ ಸಂಸ್ಥೆಗಳು ವಿಧಿಸುವ ಬೆಲೆಗಿಂತ ಸಪ್ಲೈಕೋ ಮೂಲಕ ಕಡಿಮೆ ಬೆಲೆಯಲ್ಲಿ ಉತ್ಪನ್ನಗಳು ಜನರಿಗೆ ಲಭ್ಯವಾಗುವಂತೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಶಾಸಕ ಇ.ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತ ಪ್ರಥಮ ಮಾರಾಟವನ್ನು ನಡೆಸಿಕೊಟ್ಟರು. ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಲತಾ, ಕೆ.ವಿ.ಸರಸ್ವತಿ, ಕೆ.ಅನೀಸನ್,.ವಿ. ಪ್ರಭಾವತಿ, ನಗರಸಭಾ ಸದಸ್ಯರಾದ ಎನ್.ವಿ.ರಾಜನ್, ಪಳ್ಳಿಕ್ಕೈ ರಾಧಾಕೃಷ್ಣನ್, ಪಿ.ವಿ. ಮೋಹನನ್, ಕೆ.ರವೀಂದ್ರನ್, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಪ್ಲೈಕೋಪ್ರಧಾನ ವ್ಯವಸ್ಥಾಪಕ ವಿ.ಕೆ. ಅಬ್ದುಲ್ ಖಾದರ್ ಸ್ವಾಗತಿಸಿದರು. ಜಿಲ್ಲಾ ಸರಬರಾಜು ಅಧಿಕಾರಿ ಕೆ.ಎನ್. ಬಿಂದು ವಂದಿಸಿದರು.


