ನವದೆಹಲಿ: ಸಾರ್ವಜನಿಕ ಆರೋಗ್ಯ ನಿಯಮಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಕೇರಳ ಸರ್ಕಾರಕ್ಕೆ ಸಹಾಯ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಜಂಟಿ ಪ್ರತಿಸ್ಪಂದನ ತಂಡವನ್ನು ಕೇರಳಕ್ಕೆ ಕಳುಹಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ನಿಫಾ ವೈರಸ್‌ನ 2 ಪ್ರಕರಣಗಳು ಪತ್ತೆಯಾಗಿರುವ ಕಾರಣದಿಂದ ಈ ಬೆಳವಣಿಗೆ ನಡೆದಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.
38 ವರ್ಷದ ಮಹಿಳೆಯೊಬ್ಬರಿಗೆ ನಿಫಾ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ. ಜತೆಗೆ ಇತ್ತೀಚೆಗಷ್ಟೇ ಅನಾರೋಗ್ಯದಿಂದ ಮೃತಪಟ್ಟ 18 ವರ್ಷದ ಯುವತಿಗೂ ನಿಫಾ ಸೋಂಕು ತಗುಲಿತ್ತು ಎಂಬುದು ದೃಢಪಟ್ಟಿದೆ. ಈ ಕಾರಣದಿಂದ ರಾಜ್ಯದಲ್ಲಿ ರೋಗ ತಪಾಸಣೆ, ನಿಯಂತ್ರಣ ಕ್ರಮಗಳನ್ನು ಚುರುಕುಗೊಳಿಸಲಾಗಿದೆ.
ಕೇಂದ್ರ ಸಮಗ್ರ ರೋಗ ನಿಯಂತ್ರಣ ತಂಡವೂ ಕೂಡ ರಾಜ್ಯ ಘಟಕದ ಸಂಪರ್ಕದಲ್ಲಿದ್ದು, ರಾಜ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವುದಾಗಿ ಹೇಳಿದೆ. ಏತನ್ಮಧ್ಯೆ, ಕೇಂದ್ರದಿಂದ ತಂಡ ನಿಯೋಜಿಸುವ ಪ್ರಸ್ತಾಪ ಬಂದಿದೆ ಎನ್ನಲಾಗಿದೆ.





