ಕಾಸರಗೋಡು: ಪಿಲಿಕೋಡ್ ಗ್ರಾಮ ಪಂಚಾಯಿತಿಯಲ್ಲಿರುವ ಗ್ರಾಮಕಿರಣ ಬೀದಿ ದೀಪ ನಿರ್ಮಾಣ ಮತ್ತು ನಿರ್ವಹಣಾ ಘಟಕವು ಇಂದು ಮಹಿಳೆಯರ ಗುಂಪಿಗೆ ಜೀವನದ ಬೆಳಕನ್ನು ತೋರಿಸುತ್ತಿದೆ.
ಕುಟುಂಬಶ್ರೀಯ ಜಾಬ್ ಕೆಫೆ ನೇತೃತ್ವದಲ್ಲಿ ಚೆರುವತ್ತೂರು ಸಿಡಿಎಸ್ ಹಾಲ್‍ನಲ್ಲಿ ತರಬೇತಿ ನೀಡುವ ಮೂಲಕ ಆರಂಭಗೊಂಡ ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಆರಂಭದಲ್ಲಿ ಎಲ್‍ಇಡಿ ಬಲ್ಬ್ ತಯಾರಿಕೆಯಲ್ಲಿ ತರಬೇತಿ ನೀಡಲಾಗಿದ್ದು, ನಂತರ, ಇದನ್ನು ಬೀದಿ ದೀಪ ತಯಾರಿಕೆಗೆ ವಿಸ್ತರಿಸಲಾಯಿತು. ಮಾರ್ಚ್ 2018 ರಲ್ಲಿ, ಜಿಲ್ಲಾ ಕುಟುಂಬಶ್ರೀ ಮಿಷನ್ ನೇತೃತ್ವದಲ್ಲಿ ವಲಿಯಪರಂಬ, ತ್ರಿಕರಿಪುರ, ಪಡನ್ನ, ಚೆರ್ವತ್ತೂರು ಗ್ರಾಮಪಂಚಾಯಿತಿ ಮತ್ತು ನೀಲೇಶ್ವರ ನಗರಸಭೆಯ ಇಪ್ಪತ್ಮೂರು ಮಂದಿ ಮಹಿಳೆಯರಿಗೆ ಬೀದಿ ದೀಪ ತಯಾರಿಕೆಯಲ್ಲಿ ತರಬೇತಿ ನೀಡಲಾಯಿತು.
ಹೆಚ್ಚಿದ ಆತ್ಮವಿಶ್ವಾಸ:
ಮಹಿಳೆಯರು ಸಾಮಾನ್ಯವಾಗಿ ತೊಡಗಿಸಿಕೊಳ್ಳಲು ಹಿಂದೇಟುಹಾಕುತ್ತಿರುವ ಇಂತಹ ಕ್ಷೇತ್ರಕ್ಕೆ ಕಾಲಿಡುವಾಗ ಕಾಡುತ್ತಿದ್ದ ಆತಂಕ ಇಂದು ದೂರಾಗಿದೆ. ಕಳೆದ ಆರು ವರ್ಷಗಳಲ್ಲಿ ನಾಡಿಗೆ ಬೆಳಕು ನೀಡುತ್ತಿರುವ ಗ್ರಾಮ ಕಿರಣ ಇಂದು ಹದಿನಾಲ್ಕು ಸದಸ್ಯರನ್ನು ಹೊಂದಿದೆ. ಪ್ರಸಕ್ತ ಪಿಲಿಕೋಡ್‍ನ ಎಡಚ್ಚೇರಿಯಲ್ಲಿ ಘಟಕದ ಕಚೇರಿ ಕಾರ್ಯಾಚರಿಸುತ್ತಿದೆ. ಎಲ್‍ಇಡಿ ಬಲ್ಬ್‍ಗಳು ಮತ್ತು ಬೀದಿ ದೀಪಗಳನ್ನು ತಯಾರಿಸಿ ಜಿಲ್ಲೆಯ ಸುಮಾರು ಇಪ್ಪತ್ತು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಪೂರೈಸಲಾಗುತ್ತಿದೆ. ದೋಷಪೂರಿತ ಬೀದಿ ದೀಪಗಳನ್ನು ದುರಸ್ತಿ ಮಾಡುವುದರಿಂದ ಹಿಡಿದು ಹೊಸ ಬಲ್ಬ್‍ಗಳನ್ನು ಅಳವಡಿಸುವ ವರೆಗೆ ಬೆಳಗ್ಗಿಂದ ಸಂಜೆ ವರೆಗೆ ಇವರ ಈ ಕಾಯಕ ಮುಂದುವರಿಯುತ್ತಿದೆ. ಇತರೆ ರಾಜ್ಯಗಳಿಂದ ತರುವ ಕಚ್ಛಾ ವಸ್ತುಗಳನ್ನು ಬಳಸಿ ಬಲ್ಬುಗಳನ್ನು ತಯಾರಿಸಲಾಗುತ್ತದೆ.
ಸರ್ಕಾರಿ ಸಂಸ್ಥೆಗಳಲ್ಲದೆ ಸಾರ್ವಜನಿಕರೂ ಗ್ರಾಮಕಿರಣ ಬಲ್ಬ್‍ಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಆರಂಭಿಕ ದಿನಗಳಲ್ಲಿ, ಬಲ್ಬ್‍ಗಳನ್ನು ನೇರವಾಗಿ ಮನೆಗಳಿಗೆ ಮಾರಾಟ ಮಾಡಲಾಗುತ್ತಿದ್ದರೆ, ಇಂದು, ಗ್ರಾಮ ಕಿರಣ ಮೂಲಕ ತಯಾರಿಸಿದ ಬಲ್ಬ್‍ಗಳು ವಿವಿಧೆಡೆ ನಡೆಯುವ ಪ್ರದರ್ಶನ ಮತ್ತು ಮಾರುಕಟ್ಟೆ ವೇದಿಕೆಗಳಲ್ಲಿ ಲಭ್ಯವಿದೆ.
ಭವಿಷ್ಯದಲ್ಲಿ, ಸೌರ ದೀಪಗಳ ತಯಾರಿಕೆಯಲ್ಲಿ ತರಬೇತಿ ನೀಡುವ ಮೂಲಕ ಸೌರಯೋಜನೆಗೆ ಬೆಂಬಲ ನೀಡುವ ಯೋಜನೆಯೂ ಸಂಸ್ಥೆ ಹೊಂದಿದೆ. ಅಧಿಕಾರಿಗಳು ಇದನ್ನು ಹೆಚ್ಚಿನ ಹಂತಗಳಿಗೆ ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ತಮ್ಮಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸಿರುವುದಾಗಿ ಗ್ರಾಮ ಕಿರಣ ಘಟಕ ಕಾರ್ಯದರ್ಶಿ ಕೆ.ವಿ.ಕೃಷ್ಣವಿಜಿ ತಿಳಿಸುತ್ತಾರೆ.
2018 ರಲ್ಲಿ ಈ ಉಪಜೀವನ ಕ್ರಮ ಪ್ರಾರಂಭಿಸುವಾಗ, ಆದಾಯವು ತುಂಬಾ ಕಡಿಮೆಯಾಗಿತ್ತು. ಆದಾಗ್ಯೂ, ನಂತರ, ಬೀದಿ ದೀಪಗಳ ನಿರ್ಮಾಣ ಪ್ರಾರಂಭವಾದಾಗ, ಆದಾಯದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇಂದು ಈ ಯೋಜನೆಯು ವರ್ಷಕ್ಕೆ 1 ಕೋಟಿ ರೂ.ಗಳಿಗಿಂತ ಹೆಚ್ಚು ಆದಾಯವನ್ನು ಗಳಿಸುತ್ತದೆ. ಈ ಯೋಜನೆಯು ಹೊರಗಿನಿಂದ ಬಂದ ಆರು ಜನರಿಗೆ ಉದ್ಯೋಗವನ್ನು ಒದಗಿಸಿದೆ. ಮನೆಗಳಿಗೆ ಅಲಂಕಾರಿಕ ಬಲ್ಬ್‍ಗಳು ಮತ್ತು ಸೌರಶಕ್ತಿ ಬಲ್ಬ್‍ಗಳನ್ನು ತಯಾರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಮೂಲಕ ತಮ್ಮ ಆದಾಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಯೋಜನೆ ಹಮ್ಮಿಕೊಂಡಿರುವುದಾಗಿ ಗ್ರಾಮ ಕಿರಣ ಸಂಯೋಜಕ ಪಿ.ಪಿ. ಅಶೋಕನ್ ಅಭಿಪ್ರಾಯಪಡುತ್ತಾರೆ.





