ಕಾಸರಗೋಡು: ಜಿಲ್ಲೆಯಲ್ಲಿ ಮತ್ತೆ ಬಿರುಸಿನ ಮಳೆ ಆರಂಭಗೊಂಡಿದ್ದು, ರಾಜ್ಯಾದ್ಯಂತ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಸೂಚನೆ ನೀಡಿದೆ. ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ ಯೆಲ್ಲೋ ಅಲರ್ಟ್ ಜಾರಿಗೊಳಿಸಲಾಗಿತ್ತು. ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, 24 ತಾಸುಗಳಲ್ಲಿ64.5 ಮಿ.ಮೀ ನಿಂದ 115.5 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ವ್ಯಾಪಕ ಹಾನಿ:
ಬಿರುಸಿನ ಮಳೆಗೆ ಜಿಲ್ಲಾದ್ಯಂತ ವ್ಯಾಪಕ ಹಾನಿಯುಂಟಾಘಿದೆಎ. ಮೀಂಜ ಪಂಚಾಯಿತಿ ಅರಿಯಾಳ ವಾರ್ಡು ಕಳ್ಳಿಗೆ ನಿವಾಸಿ ಬಾಬು ರಐ ಎಂಬವರ ಮನೆ ಛಾವಣಿ ಕುಸಿದು ಬಿದ್ದಿದ್ದು, ಮನೆಯೊಳಗಿದ್ದ ಬಾಬು ರೈ ಹಾಗೂ ಅವರ ಪುತ್ರಿ ಹೊರಕ್ಕೆ ಧಾವಿಸಿದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಮನೆಯೊಳಗಿದ್ದ ಧವಸಧಾನ್ಯ, ಬಟ್ಟೆ ಹಾಗೂ ಇತರ ಸಾಂಗ್ರಿ ನೀರಿನಲ್ಲಿ ತೋಯ್ದು ಹಾನಿಗೀಡಾಗಿದೆ. ಸ್ಥಳೀಯರು ಧಾವಿಸಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದು, ಬಾಬುರೈ ಹಾಗೂ ಅವರ ಪುತ್ರಿಯನ್ನು ಸಂಬಂಧಿಕರ ಮನೆಗೆ ಕಳುಹಿಸಲಾಘಿದೆ. ಕುಂಬಳೆ ಕೊಯಿಪ್ಪಾಡಿ ಕಡಪ್ಪುರ ನಿವಾಸಿ ದಿ. ಆಲಿಮ ಎಂಬವರ ಪುತ್ರಿ ಆಮಿನಾ ಅವರ ಮನೆ ಮಹಡಿ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಆಮಿನಾ ಹೊರಕ್ಕೆ ಧಾವಿಸಿದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಜಿಲ್ಲೆಯ ಉಪ್ಪಳ ಹನುಮಾನ್‍ನಗರ, ಮೊಗ್ರಾಲ್‍ಪುತ್ತೂರಿನ ಕಾವುಗೋಳಿ, ತ್ರಿಕ್ಕನ್ನಾಡ್ ಕಡಪ್ಪುರದಲ್ಲಿ ಸಮುದ್ರ ಕೊರೆತ ಹೆಚ್ಚಾಗಿದ್ದು, ಇಲ್ಲಿನ ಜನತೆ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಹಲವಾರು ತೆಂಗಿನ ಮರಗಳು ಸಮುದ್ರಪಾಲಾಗಿದೆ.
ಚಿತ್ರ: ಮೊಗ್ರಾಲ್‍ಪುತ್ತೂರಿನ ಕಾವುಗೋಳಿ ಕಡಪ್ಪುರದಲ್ಲಿ ಸಮುದ್ರಕೊರೆತದಿಂದ ಹಲವಾರು ತೆಂಗಿನಮರಗಳು ಸಮುದ್ರಪಾಲಾಗಿದೆ.





