ಕಾಸರಗೋಡು: ಕರಾವಳಿ ಪ್ರದೇಶವನ್ನು ಸಮುದ್ರ ಕೊರೆತದಿಂದ ರಕ್ಷಿಸಿ, ಜನರ ಜೀವ, ಮನೆ ಮತ್ತು ಆಸ್ತಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಉದುಮ ಪಂಚಾಯತ್ ಸಮಿತಿ ನೇತೃತ್ವದಲ್ಲಿ ರಸ್ತೆ ತಡೆ ಅಭಿಯಾನ ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಯಿತು.
ಬಿರುಸಿನ ಮಳೆಯನ್ನು ಲೆಕ್ಕಿಸದೆ, ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರು ಬೇಕಲದಿಂದ ಪ್ರತಿಭಟನಾಮೆರವಣಿಗೆ ಮೂಲಕ ತ್ರಿಕ್ಕನ್ನಾಡು ಪ್ರದೇಶದ ಕರಾವಳಿಗೆ ಆಗಮಿಸಿದ್ದರು. ಸಮುದ್ರ ಕೊರೆತದಿಂದ ತ್ರಿಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನ ಎದುರಿನ ರಸ್ತೆಯನ್ನು ಆಕ್ರಮಿಸಲು ಕೆಲವೇ ಮೀಟರ್ ಬಾಕಿಯಿದ್ದು, ಕಾಸರಗೋಡು-ಚಂದ್ರಗಿರಿ-ಕಾಞಂಗಾಡು ಕೆಎಸ್‍ಟಿಪಿ ರಸ್ತೆ ಸಮುದ್ರಪಾಲಾಗುವ ಭೀತಿ ಎದುರಿಸುತ್ತಿದೆ. ರಸ್ತೆ ಹಾನಿಗೀಡಾದಲ್ಲಿ ಪುರಾತನ ಹಾಗೂ ಪುರಾಣಪ್ರಸಿದ್ಧ ತೃಕ್ಕನ್ನಾಡು ತ್ರಯಂಬಕೇಶ್ವರ ದೇವಸ್ಥಾನಕ್ಕೂ ಹಾಣಿ ಸಂಭವಿಸುವ ಸಾಧ್ಯತೆಯಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರು ಘೊಷಣೆ ಕೂಗುತ್ತಾ ಸಮುದ್ರಕ್ಕಿಳಿದು ತಮ್ಮ ಪ್ರತಿಭಟನೆ ಮುಂದುವರಿಸಿದರು. ಇದು ಸ್ಥಳದಲ್ಲಿದ್ದ ಪೊಲೀಸರಲ್ಲೂ ಆತಂಕ ಮೂಡಿಸಿದ್ದು, ನಂತರ ಪ್ರತಿಭಟನಾಕಾರರನ್ನು ಸಮುದ್ರದಿಂದ ಮೇಲಕ್ಕೆ ತೆರಳುವಂತೆ ಮನವೊಲಿಸಿದರು. ಪ್ರತಿಭಟನಾಕಾರರು ಮಳೆಯನ್ನೂ ಲೆಕ್ಕಿಸದೆ ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು.
ಬಿಜೆಪಿ ಕೋಯಿಕ್ಕೋಡ್ ವಲಯ ಸಮಿ ಅಧ್ಯಕ್ಷ, ವಕೀಲ ಕೆ. ಶ್ರೀಕಾಂತ್ ಧರಣಿ ಉದ್ಘಾಟಿಸಿದರು. ತ್ರಿಕನ್ನಾಡು ದೇವಸ್ಥಾನ ಉತ್ಸವಕ್ಕೆ ಸಂಬಂಧಿಸಿದಂತೆ ದೇವಸ್ಥಾನದಿಂದ ಶ್ರೀದೇವರು ಭೇಟಿ ನೀಡುತ್ತಿದ್ದ ಸಮುದ್ರ ದಡದ ಮಂಟಪ ಹಾಗೂ ಶ್ರೀ ಕೊಡುಂಗಲ್ಲೂರು ದೇವಿಯ ಕಾಣಿಕೆ ಹುಂಡಿಯೂ ಸಮುದ್ರಪಾಲಾಗಿದೆ. ಈ ಪ್ರದೇಶದಲ್ಲಿ ಸೂಕ್ತ ತಡೆಗೋಡೆ ನಿರ್ಮಿಸಿ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಷ್ಕರ ತೀವ್ರಗೊಳಿಸಲಾಗುವುದು ಎಂದು ಶ್ರೀಕಾಂತ್ ಎಚ್ಚರಿಸಿದ್ದಾರೆ.
ಉದುಮ ಮಂಡಲ ಸಮಿತಿ ಅಧ್ಯಕ್ಷೆ ಶೈನಿಮೋಳ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್, ಉದುಮ ಮಂಡಲ ಉಪಾಧ್ಯಕ್ಷರಾದ ತಂಬಾನ್ ಆಚೇರಿ, ಸದಾಶಿವನ್ ಮಣಿಯಂಗಾನಂ ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್.ಎಂ. ಕೂಟಕ್ಕಣಿ ಸ್ವಾಗತಿಸಿದರು. ಮುಖಂಡರಾದ ಸೌಮ್ಯ ಪದ್ಮನಾಭನ್, ಮಧುಸೂದನನ್, ವಿನಿಲ್ ಮುಲ್ಲಚೇರಿ, ಮಣಿಕಂಠನ್, ನಿತಿಲ್ ಕೃಷ್ಣ, ವಿನಯನ್ ಕೋಟಿಕುಳಂ ನೇತೃತ್ವ ವಹಿಸಿದ್ದರು. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಚಿತ್ರ: ಕರಾವಳಿಪ್ರದೇಶವನ್ನು ಸಮುದ್ರಕೊರೆತದಿಂದ ರಕ್ಷಿಸುವಂತೆ ಆಗ್ರಹಿಸಿ ಬಿಜೆಪಿ ಉದುಮ ಮಂಡಲ ಸಮಿತಿ ಕಾರ್ಯಕರ್ತರು ತ್ರಿಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನ ಎದುರು ಸಮುದ್ರಕ್ಕಿಳಿದು ಪ್ರತಿಭಟಿಸಿದರು. ಬಿಜೆಪಿ ಕೋಯಿಕ್ಕೋಡು ವಲಯಾಧ್ಯಕ್ಷ ಕೆ.ಶ್ರೀಕಾಂತ್ ಉಪಸ್ಥಿತರಿದ್ದರು.





