ಕಾಸರಗೋಡು: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿರುವುದಾಗಿ ಆರೋಪಿಸಿ, ಜಂಟಿ ಕಾರ್ಮಿಕ ಸಂಘಟನೆಗಳು ಬುಧವಾರ ಆಹ್ವಾನ ನೀಡಿದ್ದ ರಾಷ್ಟ್ರೀಯ ಮುಷ್ಕರ ಕಾಸರಗೋಡು ಜಿಲ್ಲೆಯಲ್ಲಿ ಪೂರ್ಣಗೊಂಡಿದೆ. ಬಿ.ಎಂ.ಎಸ್ ಹೊರತುಪಡಿಸಿ ಹತ್ತಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಂಡಿತ್ತು.
ಕೇರಳದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಪೋಷಿತ ಕಾರ್ಮಿಕ ಸಂಘಟನೆಗಳು ಪ್ರತ್ಯೇಕವಾಗಿ ಮುಷ್ಕರ ನಡೆಸಿತ್ತು. ಕೆಎಸ್ಸಾರ್ಟಿಸಿ, ಖಾಸಗಿ ಬಸ್‍ಗಳು, ಆಟೋರಿಕ್ಷಾ, ಟ್ಯಾಕ್ಸಿ ವಾಹನಗಳು ರಸ್ತೆಗಿಳಿಯಲಿಲ್ಲ. ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಪಾಲ್ಗೊಳ್ಳದ ಸಂಘಟನೆಗಳಲ್ಲಿ ಪಾಲ್ಗೊಳ್ಳದ ಟ್ಯಾಕ್ಸಿ, ಆಟೋರಿಕ್ಷಾಗಳು ಎಂದಿನಂತೆ ಬಾಡಿಗೆ ನಡೆಸಲು ಮುಂದಾಘಿದ್ದರೂ, ಮುಷ್ಕರಬೆಂಬಲಿಗರು ಇದಕ್ಕೆ ತಡೆಯೊಡ್ಡಿದ್ದರು.
ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸುವ ಹೊಸ ಕಾರ್ಮಿಕ ಕಾನೂನು ರದ್ದುಗೊಳಿಸುವುದು ಪ್ರಮುಖ ಬೇಡಿಕೆಯಾಗಿದ್ದರೆ, ಕಾರ್ಮಿಕರ ಸಾಮಾಜಿಕ ಭದ್ರತೆ, ಉತ್ತಮ ವೇತನ ಮತ್ತು ಸವಲತ್ತುಗಳಿಗಾಗಿ ನಡೆಸುತ್ತಾ ಬಂದಿರುವ ಹೋರಾಟವನ್ನು ಕೇಂದ್ರ ಸರ್ಕಾರವು ನಿರ್ಲಕ್ಷಿಸಿದ ನಂತರ ಕಾರ್ಮಿಕ ಸಂಘಗಳ ಜಂಟಿ ಮುಷ್ಕರ ಸಮಿತಿಯು ಮುಷ್ಕರಕ್ಕೆ ಕರೆ ನೀಡಿತ್ತು. ಬಿಎಂಎಸ್ ಕಾರ್ಮಿಕ ಸಂಘಟನೆ ಮುಷ್ಕರದಿಂದ ದೂರ ಉಳಿದಿತ್ತು. ಹಾಲು, ಪತ್ರಿಕೆ, ಆಸ್ಪತ್ರೆ ಸೇರಿದಂತೆ ತುರ್ತು ಸೇವೆಗಳಿಂದ ಮುಷ್ಕರ ಹೊರತುಪಡಿಸಲಾಗಿತ್ತು.
ಸಾರಿಗೆ ಸಚಿವ ಕೆ.ಬಿ ಗಣೇಶ್‍ಕುಮಾರ್ ಅವರ'ಡೈಸ್‍ನೋನ್'ಬೆದರಿಕೆಗೆ ಬೆಲೆ ಕಲ್ಪಿಸದ ಕೆಎಸ್ಸಾರ್ಟಿಸಿ ಸಿಬ್ಬಂದಿ ಹರತಾಳದಲ್ಲಿ ಪಾಲ್ಗೊಳ್ಳುವ ಮೂಲಕ ಸಚಿವಗೆ ಸಡ್ಡುಹೊಡೆದಿದ್ದಾರೆ. ಪೆರ್ಲ ಪೇಟೆಯಲ್ಲಿ ಮುಷ್ಕರ ಆಂಶಿಕವಾಗಿ ಬಾಧಿಸಿತ್ತು. ಪುತ್ತೂರಿಂದ ಪಾಣಾಜೆ-ಸ್ವರ್ಗ-ಪೆರ್ಲ ಹಾದಿಯಾಗಿ ವಿಟ್ಲ ಸಂಚರಿಸುವ ಬಸ್‍ಗಳು ಎಂದಿನಂತೆ ಸಂಚಾರ ನಡೆಸಿದ್ದು, ವ್ಯಾಪಾರಿ ಮುಂಗಟ್ಟುಗಳು ತೆರೆದುಕೊಂಡಿತ್ತು. ಆಟೋ, ಟ್ಯಾಕ್ಸಿಗಳು ಸಂಚಾರ ನಡೆಸಿತ್ತು.
ಬೇಡಿಕೆ ಒಂದು-ಮೆರವಣಿಗೆ ಎರಡು:
ರಾಷ್ಟ್ರವ್ಯಾಪಿಯಾಗಿ ಸಂಯುಕ್ತ ಮುಷ್ಕರ ಸಮಿತಿ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಮುಷ್ಕರದ ಬೇಡಿಕೆ ಒಂದೇ ಆಗಿದ್ದರೂ ಕೇರಳದಲ್ಲಿ ಐಕ್ಯರಂಗ ಹಾಗೂ ಎಡರಂಗ ಪೋಷಿತ ಕಾರ್ಮಿಕ ಸಂಘಟನೆಗಳು ಪ್ರತ್ಯೇಕವಾಗಿ ಮೆರವಣಿಗೆ ಆಯೋಜಿಸಿತ್ತು. ಕಾಸರಗೋಡಿನಲ್ಲೂ ಇದು ಆವರ್ತಿಸಿದ್ದು, ಇಂಡಿ ಒಕ್ಕೂಟದ ಅಂಗಪಕ್ಷಗಳ ಪೋಷಕ ಸಂಘಟನೆಗಳು ಬೇರೆ ಬೇರೆಯಾಗಿ ಮೆರವಣಿಗೆ ಆಯೋಜಿಸಿತ್ತು.
ಎಡರಂಗ ಪೋಷಿತ ವಿವಿಧ ಕಾರ್ಮಿಕ ಸಂಘಟನೆಗಳನ್ನೊಳಗೊಂಡ ಮೆರವಣಿಗೆ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಿಂದ ಆರಂಭಿಸಿ, ಎಂ.ಜಿ ರಸ್ತೆ ಮೂಲಕ ಹಾದು ಹಳೇ ಬಸ್ ನಿಲ್ದಾಣ ವಠಾರದ ಪ್ರಧಾನ ಅಂಚೆ ಕಚೇರಿ ಬಳಿ ಸಮಾವೇಶಗೊಂಡಿತ್ತು. ಈ ಬಗ್ಗೆ ನಡೆದ ಸಭೆಯನ್ನು ಶಾಸಕ ಸಿ.ಎಚ್.ಕುಞಂಬು ಉದ್ಘಾಟಿಸಿದರು. ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಟಿ.ಕೆ. ರಾಜನ್, ಸಿ.ಎಂ.ಎ. ಜಲೀಲ್, ರಾಘವನ್ ಮಾಸ್ಟರ್, ಪಿ.ಮಣಿಮೋಹನನ್, ಸಿಜು ಕಣ್ಣನ್, ಬಿಜು ಉಣ್ಣಿತ್ತಾನ್, ಕೆ.ರವೀಂದ್ರನ್, ಪಿ.ಕುಂಜಂಬು, ಗಿರಿಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸಾಬು ಅಬ್ರಹಾಂ ಸ್ವಾಗತಿಸಿದರು.
ಐಕ್ಯರಂಗ ಪೋಷಿತ ಕಾರ್ಮಿಕ ಸಂಘಟನೆ ವತಿಯಿಂದ ನಡೆದ ಮೆರವಣಿಗೆ ಎಂಜಿ ರಸ್ತೆಯ ಬದ್ರಿಯಾ ಹೋಟೆಲ್ ವಠಾರದಿಂದ ಆರಂಭಿಸಿ, ಪ್ರಾರಂಭವಾಯಿತು. ನಂತರ ಹೊಸ ಬಸ್ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಭೆ ನಡೆಯಿತು. ಎಸ್‍ಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿಉದ್ಘಾಟಿಸಿದರು. ಐಎನ್‍ಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ವಿ. ಕುಞÂರಾಮನ್ ಅಧ್ಯಕ್ಷತೆ ವಹಿಸಿದ್ದರು. ಎಸ್‍ಟಿಯು ರಾಜ್ಯ ಉಪಾಧ್ಯಕ್ಷ ಅಶ್ರಫ್ ಎಡನೀರ್, ಎ. ಅಹ್ಮದ್ ಹಾಜಿ, ಅರ್ಜುನನ್ ತಾಐಲಂಗಾಡಿ ಮೊದಲಾದವರು ಉಪಸ್ಥಿತರಿದ್ದರು.
PHOTOS 01) ಸಂಯುಕ್ತ ಮುಷ್ಕರ ಸಮಿತಿ ವತಿಯಿಂದ ಕಾಸರಗೋಡಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
2): ಸಂಯುಕ್ತ ಮುಷ್ಕರ ಸಮಿತಿ ಬೆಂಬಲಿಗರು ವಾಹನ ಸಂಚಾರಕ್ಕೆ ತಡೆಯೊಡ್ಡಿದರು.
3): ಜನರು ಮತ್ತು ವಾಹನಗಳಿಂದ ತುಂಬಿಕೊಳ್ಳುತ್ತಿದ್ದ ಕಾಸರಗೋಡು ಹೊಸ ಬಸ್ ನಿಲ್ದಾಣ ಮುಷ್ಕರ ಹಿನ್ನೆಲೆಯಲ್ಲಿ ಬಿಕೋ ಅನ್ನುತ್ತಿದೆ.




