ಕಾಸರಗೋಡು: ರಾಷ್ಟ್ರೀಯ ಮುಷ್ಕರದ ಮರೆಯಲ್ಲಿ, ಕೆಲಸಕ್ಕೆ ಹಾಜರಾಗಿದ್ದ ಅಜಾನೂರು ಗ್ರಾಮಾಧಿಕಾರಿ ಜಯಲಕ್ಷ್ಮಿ ಅವರ ಕಚೇರಿಗೆ ನುಗ್ಗಿ, ಬೆದರಿಕೆ ಹಾಕಿರುವ ಕ್ರಮವನ್ನು ಕೇರಳ ಎನ್.ಜಿ.ಓ ಸಂಘ್ ಖಂಡಿಸಿದ್ದು, ಮಹಿಳಾ ಉದ್ಯೋಗಿಗೆ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಸಂಘಟನೆ ವತಿಯಿಂದ ಪ್ರತಿಭಟನಾ ಸಭೆ ನಡೆಸಲಾಯಿತು.
ಹರತಾಳ ಬೆಂಬಲಿಗರು ಕಚೇರಿಗೆ ಬಲವಂತವಾಗಿ ನುಗ್ಗಿ, ಕಚೇರಿ ಮುಚ್ಚುವಂತೆ ಒತ್ತಾಯಿಸಿರುವುದಲ್ಲದೆ, ಬಲಪ್ರಯೋಗಿಸಿ ಅವರನ್ನು ಹೊರದಬ್ಬುವ ಯತ್ನ ನಡೆಸಿದ್ದಾರೆ. ಹರತಾಳ ಬೆಂಬಲಿಗರು ಬಲಪ್ರಯೋಗದಿಂದ ನೌಕರರನ್ನು ಬೆದರಿಸಿ, ಮಣಿಸಲು ನಡೆಸುತ್ತಿರುವ ಯತ್ನ ಸಫಲವಾಗದು. ಇಂತಹ ಕ್ರಮವನ್ನು ಎನ್‍ಜಿಓ ಸಂಘಟನೆ ಪ್ರಬಲವಾಗಿ ವಿರೋಧಿಸಲಿದೆ. ಹರತಾಳ ಬೆಂಬಲಿಗರು ನಡೆಸಿರುವ ಬಲವಂತದ ಕ್ರಮಕ್ಕೆ ಅದೇ ರೀತಿಯ ಪ್ರತ್ಯುತ್ತರ ನೀಡಲು ಸಂಘಟನೆ ಶಕ್ತವಾಗಿದೆ ಎಂದು ಎನ್‍ಜಿಓ ಸಂಘ್ ಪದಾಧಿಖಾರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನಾ ಸಭೆಗೆ ಸಂಘಟನೆ ಜಿಲ್ಲಾಧ್ಯಕ್ಷ ರಂಜಿತ್ ಕೆ, ಪೀತಾಂಬರನ್, ಸುನೀಲ ಕುಮಾರ ರವಿ ಕೊಟ್ಟೋಡಿ, ಸಂತೋಷ್ ವಿ.ಕೆ. ಮೊದಲಾದವರು ನೇತೃತ್ವ ನೀಡಿದ್ದರು.

