ಕಾಸರಗೋಡು: ಸಾರ್ವಜನಿಕ ಶಿಕ್ಷಣವನ್ನು ಅಧ:ಪತನಗೊಳಿಸಿದ ಎಡರಂಗ ಸರ್ಕಾರದ ವಿರುದ್ಧ ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ಡಿಡಿಇ ಕಚೇರಿ ಮುಂದೆ ಮಾರ್ಚ್ ಮತ್ತು ಧರಣಿಯನ್ನು ಶನಿವಾರ ನಡೆಸಿತು.
ಧರಣಿಯನ್ನು ದೇಶೀಯ ಅಧ್ಯಾಪಕ ಪರಿಷತ್ ನ ರಾಜ್ಯ ಸಮಿತಿ ಉಪಾಧ್ಯಕ್ಷ ಕೆ.ಕೆ ರಾಜೇಶ್ ಉದ್ಘಾಟಿಸಿ ಸರ್ಕಾರ ಅಧ್ಯಾಪಕ ವರ್ಗವನ್ನು ಕಡೆಗಣಿಸುತ್ತಿದೆ. ನ್ಯಾಯವಾಗಿ ಲಭಿಸಬೇಕಾದ ಸವಲತ್ತುಗಳನ್ನು ಕೊಡದೆ ಶೋಷಣೆ ಮಾಡುತ್ತಿದೆ. ಅಧ್ಯಾಪಕರ ಬದುಕಿಗೆ ಭದ್ರತೆಯೇ ಇಲ್ಲದಾಗಿದೆ. ಸಾರ್ವಜನಿಕ ಶಿಕ್ಷಣ ರಂಗವನ್ನು ಅಧಃಪತನಗೊಳಿಸಿದ ಎಡರಂಗ ಸರಕಾರದ ಕಾರ್ಯವೈಖರಿಯ ವಿರುದ್ಧ ಹೋರಾಡುವ ಸಂದರ್ಭ ಒದಗಿ ಬಂದಿದೆ ಎಂದರು.
ಸಾರ್ವಜನಿಕ ಶಿಕ್ಷಣ ರಂಗದ ಬೇಡಿಕೆಗಳಾದ 12ನೇ ವೇತನ ಪರಿಷ್ಕರಣೆ ಎಲ್ಲಿದೆ, ಪಿಎಂಶ್ರೀ ಯೋಜನೆಯನ್ನು ಏಕೆ ಜಾರಿಗೆ ತರಲಾಗಿಲ್ಲ, ಸ್ಟಾಟುಟರಿ ಪಿಂಚಣಿ ಎಲ್ಲಿದೆ, ಮೂರು ಕಂತುಗಳ ತುಟ್ಟಿ ಭತ್ಯೆಯ 117 ತಿಂಗಳ ಬಾಕಿ ಮತ್ತು 6 ವರ್ಷಗಳ ಲೀವ್ ಸರೆಂಡರ್ , 2019ರ ವೇತನ ಪರಿಷ್ಕರಣೆ ಬಾಕಿ ಎಲ್ಲಿ, ಮೆಡಿಸೆಪ್ ಚಿಕಿತ್ಸೆ ಎಲ್ಲಿದೆ ಸಂಸ್ಕøತ ವಿದ್ಯಾರ್ಥಿವೇತನವನ್ನು ಯಾಕೆ ಮರುಸ್ಥಾಪಿಸಿಲ್ಲ, ನೇಮಕಾತಿಗೊಂಡ ಅಧ್ಯಾಪಕರ ಅಂಗೀಕಾರದ ಬಗ್ಗೆ ವಿಳಂಬ ನೀತಿ ಯಾಕೆ, ಪ್ರಿ-ಪ್ರೈಮರಿ ಅಧ್ಯಾಪಕ ಹುದ್ದೆಗಳಿಗೆ ಅಂಗೀಕಾರ ನೀಡಲಿಲ್ಲ ಯಾಕೆ, ಕನ್ನಡಿಗರ ಮೇಲಿನ ಮಲತಾಯಿ ಧೋರಣೆಗೆ ಕೊನೆ ಯಾವಾಗ ಎನ್ನುವ ಬೇಡಿಕೆಯನ್ನು ಮುಂದಿಟ್ಟು ಈ ಧರಣಿಯನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಸಮಿತಿ ಸದಸ್ಯರು ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ರಾಜ್ಯ ವನಿತಾ ವಿಂಗ್ ಜೊತೆ ಕಾರ್ಯದರ್ಶಿ ಸುಚೇತ ಟೀಚರ್, ರಾಜ್ಯ ಸಮಿತಿ ಸದಸ್ಯ ರಂಜಿತ್, ಕುಂಬಳೆ ತಾಲೂಕು ಅಧ್ಯಕ್ಷ ದಿನೇಶ್, ಜಿಲ್ಲಾಧ್ಯಕ್ಷ ಕೃಷ್ಣನ್ ಮಾಸ್ತರ್ ಉಪಸ್ಥಿತರಿದ್ದು ಮಾತನಾಡಿದರು.
ದೇಶೀಯ ಅಧ್ಯಾಪಕ ಪರಿಷತ್ ನ ರಾಜ್ಯ ಸಮಿತಿ ಸದಸ್ಯರು, ತಾಲೂಕ ಅಧ್ಯಕ್ಷ ರು ಹಾಗೂ ಪದಾಧಿಕಾರಿ ಅಧ್ಯಾಪಕ ಸದಸ್ಯರುಗಳು ಭಾಗವಹಿಸಿದ್ದರು. ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಅಜಿತ್ ಕುಮಾರ್ ಸ್ವಾಗತಿ, ಭ್ರಮರಾಂಬಿಕ ವಂದಿಸಿದರು.







