ಕುಂಬಳೆ: ತೆಂಗಿನೆಣ್ಣೆ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ನಕಲಿ ತೆಂಗಿನೆಣ್ಣೆ ದಂಧೆ ವ್ಯಾಪಕವಾಗುತ್ತಿದೆ. ವಿಷಾಂಶ ಬೆರೆಸಿದ ಉಪ್ಪು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ.
ತೆಂಗಿನಕಾಯಿ ಹಾಗೂ ತೆಂಗಿನೆಣ್ಣೆಗೆ ಬೆಲೆ ಹೆಚ್ಚುತ್ತಿರುವಾಗ ತೆಂಗು ಕೃಷಿಕರಿಗೆ ಇದರ ಪ್ರಯೋಜನ ಲಭಿಸುತ್ತಿಲ್ಲ. ಊರ ತೆಂಗಿನಕಾಯಿಗೆ ಕೆಜಿಗೆ 90ರಿಂದ 100 ರೂ.ವರೆಗೆ ಧಾರಣೆ ಇದೆ. ತೆಂಗಿನೆಣ್ಣೆಗೆ ಲೀಟರ್‍ಗೆ 450 ರೂ. ಇದೆ. ಕಳೆದ ವರ್ಷ ಜುಲೈಯಲ್ಲಿ ಒಂದು ಲೀಟರ್ ತೆಂಗಿನೆಣ್ಣೆಗೆ 180 ರೂ., ತೆಂಗಿನಕಾಯಿಗೆ ಕೆಜಿಗೆ 32 ರೂ. ಇತ್ತು.
ಬೆಲೆ ಹೆಚ್ಚಳ ಲಾಭ ಪಡೆಯಲು ಕಲಬೆರಕೆ ಎಣ್ಣೆ ಮಾರಾಟಕ್ಕೆ ದಂಧೆಕೋರರು ಹವಣಿಸುತ್ತಿದ್ದಾರೆ. ನಕಲಿ ಮಾರಾಟ ತಡೆಗಟ್ಟಲು ಆಹಾರ ಭದ್ರತಾ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. ನಿರಂತರ ತಪಾಸಣೆ ನಡೆಸಬೇಕಿದೆ. ಪ್ರತಿ ಬಾರಿಯೂ ಬೆಲೆ ಹೆಚ್ಚಳವಾಗುವಾಗ ಇವು ನಕಲಿ ದಂಧೆ ಸಕ್ರಿಯಗೊಳ್ಳುತ್ತವೆ. ಇಂತಹ ಎಣ್ಣೆಯನ್ನು ಹೋಟೆಲ್‍ಗಳಲ್ಲಿ, ಆಹಾರ ತಯಾರಿ ಕೇಂದ್ರಗಳಲ್ಲಿ ಉಪಯೋಗಿಸುವುದು ಮಾರಕ ರೋಗ ಬಾಧೆಗೆ ಕಾರಣವಾಗಲಿದೆ.
ಉಪ್ಪಿನಲ್ಲೂ ವಿಷಾಂಶ:
ಉಪ್ಪಿಲ್ಲದೆ ಯಾವುದೇ ಅಡುಗೆ ಇಲ್ಲ. ಇಂತಹ ಉಪ್ಪಿನಲ್ಲೂ ಭಾರಿ ಪ್ರಮಾಣದಲ್ಲಿ ಕಲಬೆರಕೆಯಾಗುತ್ತಿರುವುದಾಗಿ ವರದಿಯಾಗಿದೆ. ನಕಲಿ ಉಪ್ಪು ಸಾರ್ವಜನಿಕ ಆರೋಗ್ಯವನ್ನು ಬಾಧಿಸಲಿದೆ ಎಂದರಿತರೂ ಇದರ ವಿರುದ್ಧ ಕ್ರಮಗಳು ನಾಮಮಾತ್ರವಾಗಿವೆ. ಪ್ರಮುಖ ಬ್ರ್ಯಾಂಡ್‍ಗಳ ಉಪ್ಪುಗಳಲ್ಲೂ ವಿಷಾಂಶ ಬೆರೆತಿರುವುದಾಗಿ ಆಹಾರ ಭದ್ರತಾ ಇಲಾಖೆಯ ತಪಾಸಣೆಯಲ್ಲಿ ವ್ಯಕ್ತವಾಗಿದೆ.
ಉಪ್ಪಿಗೆ ಬಿಳಿ ಬಣ್ಣ ಲಭಿಸಲು ಕ್ಯಾಲ್ಸಿಯಂ ಕಾರ್ಬೋನೇಟ್ ಬೆರೆಸಲಾಗುತ್ತದೆ. ಇದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಅರ್ಧ ಗ್ಲಾಸ್ ನೀರು ತೆಗೆದ ಬಳಿಕ ಒಂದು ಚಮಚ ಉಪ್ಪು ಹಾಕಿ ಬೆರೆಸಬೇಕು. ದ್ರಾವಣಕ್ಕೆ ಬಿಳಿ ಬಣ್ಣ ಬಂದರೆ ಉಪ್ಪಿನಲ್ಲಿವಿಷಾಂಶ ಇರುವುದಾಗಿ ತಿಳಿಯಬಹುದು.
ಆಹಾರ ಭದ್ರತಾ ಗುಣಮಟ್ಟ ನಿಯಮ ಜಾರಿಗೆ ಬಂದರೂ ನಕಲಿ ಉಪ್ಪಿನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲಎಂಬ ದೂರು ಕೇಳಿಬರುತ್ತಿದೆ. ನೂತನ ನಿಯಮ ಪ್ರಕಾರ ಆಹಾರ ವಸ್ತುವಿನಲ್ಲಿಕಲಬೆರಕೆ ನಡೆಸಲಾಗಿದೆ ಅಥವಾ ಕಡಿಮೆ ಗುಣಮಟ್ಟದ್ದು ಎಂಬುದು ಪತ್ತೆಯಾದರೆ ಸಜೆ, ದಂಡ ಮೊದಲಾದ ಶಿಕ್ಷೆಗಳು ಜಾರಿಯಲ್ಲಿದೆ. ಅಪರಾಧದ ಕಾಠಿಣ್ಯತೆ ಅನುಸರಿಸಿ 10 ಲಕ್ಷ ರೂ.ವರೆಗೆ ದಂಡ, ಜೀವನಪರ್ಯಂತ ಸಜೆ ಶಿಕ್ಷೆಯನ್ನೂ ನೀಡಬಹುದಾಗಿದೆ. ಆದರೆ ಪ್ರಮುಖ ಬ್ರ್ಯಾಂಡ್‍ಗಳ ವಿರುದ್ಧ ನಾಮಮಾತ್ರ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಗ್ರಾಹಕರು ದೂರುತ್ತಿದ್ದಾರೆ.
ಅಭಿಮತ:
ಓಣಂ ಸೀಸನ್ ಆರಂಭಗೊಳ್ಳಲು ವಾರಗಳಷ್ಟೇ ಬಾಕಿ ಇರುವಾಗ ವಿಷಾಂಶ ಬೆರೆತ ನಕಲಿ ತೆಂಗಿನೆಣ್ಣೆ ಮಾರುಕಟ್ಟೆಯಲ್ಲಿ ತಲುಪುವ ಸಾಧ್ಯತೆ ಇದೆ. ತಪಾಸಣೆ ಚುರುಕುಗೊಳಿಸುವ ಅಗತ್ಯವಿದೆ.ಈ ಬಗ್ಗೆ ಗ್ರಾಹಕರೂ ದೂರುಗಳನ್ನು ಸಲ್ಲಿಸುವುದು ಉತ್ತಮ.
-ಎಬಿ ಐಪ್,
ಸದಸ್ಯರು, ಆಹಾರ ಸಲಹಾ ವಿಜಿಲೆನ್ಸ್ ಸಮಿತಿ ಸದಸ್ಯ.





