ನವದೆಹಲಿ: 'ನಾಗರಿಕರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯಗಳನ್ನು ತಿಳಿದುಕೊಳ್ಳಬೇಕು ಹಾಗೂ ಸ್ವಯಂ ನಿಯಂತ್ರಣ ಪಾಲಿಸಬೇಕು' ಎಂದಿರುವ ಸುಪ್ರೀಂ ಕೋರ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ನಿಯಂತ್ರಿಸಲು ಮಾರ್ಗಸೂಚಿ ರೂಪಿಸುವುದನ್ನು ಪರಿಗಣಿಸುವುದಾಗಿ ಸೋಮವಾರ ಹೇಳಿದೆ.
ಹಿಂದೂ ದೇವತೆಯ ವಿರುದ್ಧ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿರುವುದಕ್ಕೆ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣ ಎದುರಿಸುತ್ತಿರುವ ವಜಾಹತ್ ಖಾನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠ ನಡೆಸುತ್ತಿದೆ.
ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವುದು ಮೂಲಭೂತ ಕರ್ತವ್ಯಗಳಲ್ಲಿ ಒಂದು. ಆದರೆ ಅದನ್ನು ಉಲ್ಲಂಘಿಸಲಾಗುತ್ತಿದೆ. ಕನಿಷ್ಠ ಸಾಮಾಜಿಕ ಮಾಧ್ಯಮದಲ್ಲಿ ಈ ಎಲ್ಲಾ ವಿಭಜನಾ ಪ್ರವೃತ್ತಿಯನ್ನು ನಿಗ್ರಹಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ರಾಜ್ಯವು ಎಷ್ಟರ ಮಟ್ಟಿಗೆ ಇದನ್ನು ನಿಯಂತ್ರಿಸಬಹುದು?. ನಾಗರಿಕರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯವನ್ನು ತಿಳಿದಿರಬೇಕು. ಇದು ಉಲ್ಲಂಘನೆಯಾದ ಸಂದರ್ಭದಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬಹುದು. ಸರ್ಕಾರ ಮಧ್ಯಪ್ರವೇಶಿಸಲು ಯಾರೂ ಬಯಸುವುದಿಲ್ಲ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದ್ದಾರೆ.
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕು. ಆದರೆ ಸ್ವಯಂ ನಿರ್ಬಂಧ ಮತ್ತು ನಿಯಂತ್ರಣವಿಲ್ಲ. ನಾಗರಿಕರು ಈ ಮೂಲಭೂತ ಹಕ್ಕನ್ನು ಆನಂದಿಸಲು ಬಯಸಿದರೆ ಅವರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಬೇಕು ಮತ್ತು ಕೆಲವು ರೀತಿಯ ಸ್ವಯಂ ನಿರ್ಬಂಧ ಇರಬೇಕು ಎಂದೂ ಅವರು ಹೇಳಿದ್ದಾರೆ.




