ಕಾಸರಗೋಡು: ಅಪಘಾತಕ್ಕೀಡಾದ ಕಾರಿನಲ್ಲಿದ್ದವರನ್ನು ರಕ್ಷಿಸಲು ಮುಂದಾದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವೆಳ್ಳರಿಕುಂಡು ಠಾಣೆ ವ್ಯಾಫ್ತಿಯ ಬಳಾಲ್ ಮಂಗಯಂ ನಡುತ್ತೋಡು ನಿವಾಸಿ ಅರ್ಜುನನ್ ತಿಲಕ್ ಬಂಧಿತ. ಅಪಘಾತದ ಸಂದರ್ಭ ಆರೋಪಿ ಮದ್ಯದ ನಶೆಯಲ್ಲಿದ್ದನೆನ್ನಲಾಗಿದೆ.
ಈತ ಚಲಾಯಿಸುತ್ತಿದ್ದ ಕಾರು ಗುರುವಾರ ಮಧ್ಯರಾತ್ರಿ ಮಂಗಯಂ ಬಳಿ ಚರಂಡಿಗೆ ಪಲ್ಟಿಯಾಗಿತ್ತು. ಮಾಹಿತಿ ಪಡೆದು ನೈಟ್ ಪೆಟ್ರೋಲಿಂಗ್‍ನಲ್ಲಿದ್ದ ಎಎಸ್‍ಐ ಟಿ. ಮಧುರ ಅವರ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಿಮಿಸಿದ್ದು, ಈ ಸಂದರ್ಭ ಕಾರಿನೊಳಗೆ ಮದ್ಯದಮಲಿನಲ್ಲಿದ್ದ ಅರ್ಜುನನ್‍ತಿಲಕ್ ಪೊಲೀಸರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಲಾರಂಭಿಸಿದ್ದನು. ನಂತರ ಇನ್ಸ್‍ಪೆಕ್ಟರ್ ಕೆ.ಪಿ ಸತೀಶ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಅರ್ಜುನನ್ ತಿಲಕ್‍ನನ್ನು ಕಾರಿಮೊಳಗಿಂದ ಬಲವಂತವಾಗಿ ಹೊರಕ್ಕೆ ತರುತ್ತಿದ್ದಂತೆ ಇವರ ಮೇಲೆರಗಲು ಯತ್ನಿಸಿ, ಕೈಯಲ್ಲಿದ್ದ ಬೀಗದಿಂದ ಚುಚ್ಚಿಗಾಯಗೊಳಿಸಿದ್ದಾನೆ. ಗಾಯಾಳು ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.




