ಮಂಜೇಶ್ವರ: ವರ್ಕಾಡಿಯ ನಲ್ಲೆಂಗಿ ನಿವಾಸಿ ಲೂಯಿಸ್ ಮೊಂತೇರೊ ಅವರ ಪತ್ನಿ ಹಿಲ್ಡಾ ಮೊಂತೆರೋ (65)ಅವರನ್ನು ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಲೆಗೈದ ಆರೋಪಿ ಪುತ್ರನನ್ನು ಪೊಲೀಸರು ಮನೆ ವಠಾರಕ್ಕೆ ಕರೆತಂದು ಮಾಹಿತಿ ಸಂಗ್ರಹಿಸಿದರು. ಮಂಜೇಶ್ವರ ಠಾಣೆ ಇನ್ಸ್‍ಪೆಕ್ಟರ್ ಅನೂಪ್‍ಕುಮಾರ್ ನೇತೃತ್ವದ ಪೊಲೀಸರ ತಂಡ ಈತನನ್ನು ಕರೆತಂದಿದು, ತಾಯಿಯ ತಲೆಗೆ ಬಡಿದು ಕೊಲೆಗೆ ಯತ್ನಿಸಿದ ಮರದ ಸಲಾಕೆಯನ್ನು ಮನೆ ವಠಾರದಿಂದ ಪತ್ತೆಹಚ್ಚಿದ್ದಾರೆ. ಸುಟ್ಟ ಮೃತದೇಹವನ್ನು ಬಿಸಾಡಿದ್ದ ಸ್ಥಳಕ್ಕೂ ಕರೆದೊಯ್ದು ಮಾಹಿತಿ ಸಂಗ್ರಹಿಸಿದರು. ಜೂ. 27ರಂದು ಹಿಲ್ಡಾ ಮೊಂತೆರೋ ಅವರನ್ನು ಪುತ್ರ ಮೆಲ್ವಿನ್ ಮೊಂತೆರೋ ಅವರನ್ನು ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಲೆ ನಡೆಸಿರುವುದಲ್ಲದೆ, ನೆರೆಮನೆ ನಿವಾಸಿ ಹಾಗೂ ಸಂಬಂಧಿ ವಿಕ್ಟರ್ ಎಂಬವರ ಪತ್ನಿ ಲೊಲಿಟ ಅವರ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು. ಇದರಿಂದ ಲೊಲಿಟಾ ಗಂಭೀರ ಸುಟ್ಟ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸುತ್ತಿದ್ದಾರೆ.
ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಮೆಲ್ವಿನ್, ತಾಯಿಯಲ್ಲಿ ಹಣ ನೀಡುವಂತೆ ಕೇಳಿದ್ದು, ಹಣ ನೀಡದಿರುವ ದ್ವೇಷದಿಂದ ಕೊಲೆ ನಡೆಸಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಕೊಲೆ ನಂತರ ಪರಾರಿಯಾಗಲೆತ್ನಿಸಿದ ಮೆಲ್ವಿನ್‍ನನ್ನು ಕೆಲವೇ ತಾಸುಗಳೊಳಗೆ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಿಂದ ಅಲ್ಲಿನ ಪೊಲೀಸರು ಬಂಧಿಸಿದ್ದು, ಮಂಜೇಶ್ವರ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದರು.




