ಕಾಸರಗೋಡು: ಕಳೆದ ಹಲವು ವರ್ಷಗಳಿಂದ ಸೀಸನ್ ಟಿಕೆಟ್ ಪ್ರಯಾಣಿಕರು ಮತ್ತು ವಿದ್ಯಾರ್ಥಿ ಪ್ರಯಾಣಿಕರರು ಎದುರಿಸುತ್ತಿರುವ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೆ, ರೈಲ್ವೆ ಇಲಾಖೆ ಪ್ರಯಾಣಿಕರನ್ನು ವಂಚಿಸುತ್ತಿರುವ ಧೋರಣೆ ಕೈಬಿಡುವಂತೆ ಜಿಲ್ಲಾ ರೈಲ್ವೆ ಪ್ರಯಾಣಿಕರ ಅಸೋಸಿಯೇಶನ್ ಅಧ್ಯಕ್ಷ ಆರ್. ಪ್ರಶಾಂತ್‍ಕುಮಾರ್ ಆಗ್ರಹಿಸಿದ್ದಾರೆ.
ಅವರು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಕಾಸರಗೋಡು ರೈಲ್ವೆ ನಿಲ್ದಾಣ ವಠಾರರದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಧರಣಿ ಉದ್ಘಾಟಿಸಿ ಮಾತನಾಡಿದರು.
ಬೆಳಗ್ಗೆ ಮತ್ತು ಸಂಜೆ ಫಾಸ್ಟ್ ಪ್ಯಾಸೆಂಜರ್ ರೈಲಿನ ಜೊತೆಗೆ, ಮೆಮು ರೈಲು ಸೇವೆ ಒದಗಿಸಿ ಪ್ರಯಾಣಿಕರ ದಟ್ಟಣೆ ಪರರಿಹರಿಸಬೇಕು, ಕೋಯಿಕ್ಕೋಡಿನಿಂದ ಸಂಜೆ 5.10 ರ ನಂತರ ಮುಂದಿನ ಎಂಟು ಗಂಟೆಗಳ ಕಾಲ ರೈಲು ಸೇವೆ ಲಭ್ಯವಾಗದ ಪರಿಸ್ಥಿತಿ ಪರಿಹರಿಸಬೇಕು, ಕೋಯಿಕ್ಕೋಡ್‍ನಲ್ಲಿ ಪರಶುರಾಮ್ ಎಕ್ಸ್‍ಪ್ರೆಸ್ ರೈಲಿಗೆ ಒಂದು ಗಂಟೆ ಕಾ¼ಲ ನಿಲುಗಡೆ ಕೈಬಿಡಬೇಕು, ಪಾಲಕ್ಕಾಡ್-ಕಣ್ಣೂರು ವಿಶೇಷ ರೈಲನ್ನು ಮಂಜೇಶ್ವರದವರೆಗೆ ವಿಸ್ತರಿಸಬೇಕು, ಕುಂಬಲೇ, ಉಪ್ಪಳ ಮತ್ತು ಮಂಜೇಶ್ವರ ನಿಲ್ದಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು. ಪ್ರಧಾನ ಕಾರ್ಯದರ್ಶಿ ನಾಸರ್ ಚೆರ್ಕಳಂ, ಸಂಯೋಜಕ ನಿಸಾರ್ ಪೆರ್ವಾಡ್, ಜಾಹಿದಾ ಇಲ್ಯಾಸ್, ಕೋಶಾಧಿಕಾರಿ ಎಂ. ಎಂ. ಮುನೀರ್ ಮತ್ತು ಉಪಾಧ್ಯಕ್ಷ ವಕೀಲ ಟಿ. ಇ. ಅನ್ವರ್ ಉಪಸ್ಥಿತರಿದ್ದರು. ಶೆಫೀಕ್ ತೆರುವತ್ ಸ್ವಾಗತಿಸಿದರು. ಸತ್ತಾರ್ ವಂದಿಸಿದರು.





