ತಿರುವನಂತಪುರಂ: ಶಬರಿಮಲೆ ಹೆಸರಿನಲ್ಲಿ ಭಕ್ತರಿಂದ ಅಕ್ರಮವಾಗಿ ಹಣ ಸಂಗ್ರಹಿಸುತ್ತಿರುವುದನ್ನು ತಡೆಯುವುದಕ್ಕಾಗಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಬಿಡಿ) ಅಧಿಕೃತವಾಗಿ ಪ್ರಾಯೋಜಕತ್ವ ಸಮನ್ವಯಕಾರರನ್ನು ನೇಮಕಗೊಳಿಸಿದೆ.
ಈ ಕುರಿತು ಗುರುವಾರ ಪ್ರಕಟಣೆ ಹೊರಡಿಸಿರುವ ಟಿಬಿಡಿ, 'ವಿವಿಧ ರಾಜ್ಯಗಳಲ್ಲಿ ಕೆಲವು ಮಂದಿ ದೇಗುಲದ ಆಡಳಿತ ಮಂಡಳಿಯ ಸದಸ್ಯರ ಸೋಗಿನಲ್ಲಿ ಹಣ ಸಂಗ್ರಹಿಸುತ್ತಿರುವುದು ಕಂಡುಬಂದಿತ್ತು.
ಈ ಕಾರಣದಿಂದ ದೇಗುಲದ ಸಾರ್ವಜನಿಕ ವ್ಯವಹಾರ ಅಧಿಕಾರಿ ಜಿ.ಎಸ್ ಅರುಣ್ ಅವರನ್ನು ಪ್ರಾಯೋಜಕತ್ವ ಸಮನ್ವಯಕಾರರನ್ನಾಗಿ, ಛಾಯಾಗ್ರಾಹಕರಾದ ಪಿ.ವಿಜಯ್ ಕುಮಾರ್ ಅವರನ್ನು ಸಹಾಯಕ ಪ್ರಾಯೋಜಕತ್ವ ಸಮನ್ವಯಕಾರರನ್ನಾಗಿ ನೇಮಿಸಲಾಗಿದೆ' ಎಂದು ಹೇಳಿದೆ.
'ದೇವಾಲಯಕ್ಕೆ ಹಣ ಸಹಾಯ ಮಾಡಬಯಸುವವರು ಈ ಅಧಿಕಾರಿಗಳ ಮುಖಾಂತರ ಅಥವಾ ಶಬರಿಮಲೆ ದೇಗುಲದಲ್ಲಿರುವ ಕಾರ್ಯನಿರ್ವಾಹಕರ ಕಚೇರಿಗೆ ಬಂದು ದೇಣಿಗೆ ನೀಡಬಹುದು. ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕವೂ ದೇಣಿಗೆ ನೀಡಬಹುದು. ಇದರ ಹೊರತಾಗಿ ಬೇರೆ ಯಾರೇ ಹಣ ಸಂಗ್ರಹಿಸಿದರೂ ಅದಕ್ಕೆ ಮಂಡಳಿ ಜವಾಬ್ದಾರಿಯಲ್ಲ' ಎಂದೂ ತಿಳಿಸಿದೆ.




