ನವದೆಹಲಿ: 'ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ (ಐಎಸ್‌ಎಸ್) ವೀಕ್ಷಣಾ ಸ್ಥಳದಿಂದ ಭೂಮಿಯನ್ನು ನೋಡುವುದೇ 'ಆಯಕ್ಸಿಯಂ-4' ಯೋಜನೆಯ ರೋಮಾಂಚನದ ಕ್ಷಣ' ಎಂದು ಭಾರತ ಗಗನಯಾನಿ ಶುಭಾಂಶು ಶುಕ್ಲಾ ಶುಕ್ರವಾರ ಹೇಳಿದರು.
'ಆಯಕ್ಸಿಯಂ-4' ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಶುಕ್ಲಾ ಮತ್ತು ಇತರ ಮೂವರು ಐಎಸ್‌ಎಸ್ ತಲುಪಿ ಒಂದು ವಾರ ಪೂರ್ಣಗೊಂಡಿದೆ.
ಶುಕ್ರವಾರ ಅವರು ರಜೆ ಪಡೆದಿದ್ದು, ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಮಾತನಾಡಿದರು.
ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರದಲ್ಲಿ (ಯುಆರ್‌ಎಸ್‌ಸಿ) ವಿಜ್ಞಾನಿಗಳೊಂದಿಗೆ ಎಚ್‌ಎಎಂ ರೇಡಿಯೊ ಸಂಪರ್ಕದ ಮೂಲಕ ಮಾತನಾಡಿದ ಶುಕ್ಲಾ ಅವರು, 'ವಿವಿಧ ದೇಶಗಳ ಖಾದ್ಯಗಳು ಇದ್ದು, ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದೇವೆ. ಮಾವಿನ ರಸ, ಕ್ಯಾರೆಟ್ ಹಲ್ವಾ, ಹೆಸರು ಬೇಳೆ ಹಲ್ವಾ ಮತ್ತು ಇತರೆ ದೇಶಗಳ ತಿನಿಸುಗಳನ್ನು ಸವಿದೆವು' ಎಂದು ತಿಳಿಸಿದರು.
'ಒಂದು ಬಾಹ್ಯಾಕಾಶ ಯೋಜನೆಯ ಯಶಸ್ಸಿಗಾಗಿ ನಾಸಾ, ಇಸ್ರೊ, ಸ್ಪೇಸ್ ಎಕ್ಸ್, ಆಕ್ಸಿಯಂ ಎಲ್ಲವೂ ಒಗ್ಗೂಡಿವೆ. ಜಾಗತಿಕ ಸಹಭಾಗಿತ್ವದಿಂದ ಈ ಯೋಜನೆ ಸಾಧ್ಯವಾಗುತ್ತಿದೆ' ಎಂದು ಶುಕ್ಲಾ ಅಭಿಪ್ರಾಯಪಟ್ಟರು.
ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಅವಧಿ ಕಾಲ ಕಳೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ ಅವರು ಪಾತ್ರರಾಗಿದ್ದಾರೆ. ಈ ಮೂಲಕ ಗಗನಯಾನಿ ರಾಕೇಶ್ ಶರ್ಮಾ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ರಾಕೇಶ್ ಅವರು ಏಳು ದಿನ 21 ಗಂಟೆ ಮತ್ತು 40 ನಿಮಿಷ ಬಾಹ್ಯಾಕಾಶದಲ್ಲಿ ಇದ್ದರು. ಶುಕ್ಲಾ ಅವರು ಬಾಹ್ಯಾಕಾಶದಲ್ಲಿ ಈಗಾಗಲೇ 10 ದಿನ ಕಳೆದಿದ್ದಾರೆ.




