ಕಾಸರರಗೋಡು: ಸಣ್ಣ ಮಳೆಗೂ ತೋಡಿನಂತಾಗುತ್ತಿರುವ ಕಾಸರಗೋಡಿನ ರಸ್ತೆಗಳಿಂದಾಗಿ ವಾಹನ ಚಾಲಕರು ಹಾಗೂ ಸಾರ್ವಜನಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ನಗರಸಭಾ ವ್ಯಾಪ್ತಿಯ ಬಹುತೇಕ ರಸ್ತೆಗಳು ಸೂಕ್ತ ಒಳಚರಂಡಿ ವ್ಯವಸ್ಥೆಯಿಲ್ಲದೆ ನೀರು ಸಂಪೂರ್ಣ ರಸ್ತೆಯಲ್ಲೇ ಹರಿಯುವಂತಾಗಿದೆ. ಇನ್ನು ಇರುವ ಚರಂಡಿಗಳೊಳಗೆ ತ್ಯಾಜ್ಯ ತುಂಬಿಕೊಂಡು ಮಳೆನೀರು ಹರಿಯಲಾಗದೆ ರಸ್ತೆ ತೋಡಿನಂತಾಗುತ್ತಿದೆ.
ನಗರದ ಬಹುತೇಕ ಕಡೆ ರಸ್ತೆ ಅಂಚಿನ ಒಳಚರಂಡಿ ಸಮರ್ಪಕವಾಗಿಲ್ಲ. ಹೊಸಬಸ್‍ನಿಲ್ದಾಣ ಸನಿಹದ ಕೋಟೆಕಣಿ ರಸ್ತೆ, ಪ್ರೆಸ್‍ಕ್ಲಬ್ ಜಂಕ್ಷನ್, ಬ್ಯಾಂಕ್ ರಸ್ತೆ, ಕೆ.ಪಿ.ಆರ್ ರಾವ್ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಮಳೆನೀರು ರಸ್ತೆಯಲ್ಲೇ ಹರಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಮಳೆನೀರು ರಸ್ತೆಯಲ್ಲೇ ಹರಿಯುತ್ತಿರುವುದರಿಂದ ಈ ಪ್ರದೇಶದೆಲ್ಲೆಡೆ ರಸ್ತೆ ಶಿಥಿಲಾವಸ್ಥೆಯಲ್ಲಿದೆ. ಸಣ್ಣಹೊಂಡಗಳೂ ಬೃಹದಾಕಾರಪಡೆದುಕೊಳ್ಳುತ್ತಿದ್ದು, ದ್ವಿಚಕ್ರ ವಾಹನ, ಆಟೋರಿಕ್ಷಾಗಳಿಗೆ ಸಂಚರಿಸಲಾಗದ ಸ್ಥಿತಿಯಲ್ಲಿದೆ. ಕರಂದಕ್ಕಾಡಿನಿಂದ ಮಧೂರು ರಸ್ತೆ ಕೂಡ್ಲು ವರೆಗೂ ಅತ್ಯಂತ ಶೋಚನೀಯಾವಸ್ಥೆಯಲ್ಲಿದೆ. ಕರಂದಕ್ಕಾಡಿನಿಂದ ಬ್ಯಾಂಕ್ ರಸ್ತೆ ಹಾದಿಯಾಗಿ ರೈಲ್ವೆ ನಿಲ್ದಾಣ ತೆರಳುವ ರಸ್ತೆಯಂತೂ ಹೇಳ ಹೆಸರಿಲ್ಲದಂತೆ ಹಾನಿಗೊಂಡಿದೆ. ಮಳೆನೆಪದಲ್ಲಿ ರಸ್ತೆದುರಸ್ತಿ ಸಾಧ್ಯವಾಗುತ್ತಿಲ್ಲ ಎಂದು ತಿಳಿಸುವ ಅಧಿಕಾರಿಗಳು, ಮಳೆದೂರಾದರೂ, ತಾತ್ಕಾಲಿಕ ದುರಸ್ತಿಗೂ ಮುಂದಾಗುತ್ತಿಲ್ಲ ಎಂಬ ದೂರು ವ್ಯಾಪಕಗೊಂಡಿದೆ. ನಗರಪ್ರದೇಶದಲ್ಲಿನ ರಸ್ತೆಗಳ ದುರಸ್ತಿಬಗ್ಗೆ ನಗರಸಭಾ ಆಡಳಿತ ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ವಿರುದ್ಧ ಬಿಎಂಎಸ್ ಕಾರ್ಮಿಕ ಸಂಘಟನೆ ಪ್ರತಿಭಟನೆಯನ್ನೂ ಹಮ್ಮಿಕೊಂಡಿತ್ತು.




