ಕಾಸರಗೋಡು: ಬೇಕಲ ತ್ರಿಕ್ಕನ್ನಾಡು ಪ್ರದೇಶದಲ್ಲಿ ಹೆಚ್ಚುತ್ತಿರುವ ಸಮುದ್ರ ಕೊರೆತ ತಡೆಗಟ್ಟಲು ತುರ್ತುಸಹಾಯ ಕೋರಿ ಜಿಲ್ಲೆಯ ಶಾಸಕರಾದ ಸಿ.ಎಚ್. ಕುಂಞಂಬು ಮತ್ತು ಎಂ. ರಾಜಗೋಪಾಲನ್ ಅವರು ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ರೋಶಿ ಆಗಸ್ಟೀನ್ ಅವರನ್ನು ತಿರುವನಂತಪುರದ ಅವರ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.
ಸಮುದ್ರ ಕೊರೆತ ತಡೆಗಟ್ಟುವ ಕ್ರಮಗಳಿಗಾಗಿ ಮೊದಲ ಹಂತದಲ್ಲಿ 25 ಲಕ್ಷ ರೂ. ಮೊತ್ತ ಮಂಜೂರುಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ತ್ರಿಕ್ಕನ್ನಾಡು, ಕೋಟಿಕುಳಂ, ಚಿರಮ್ಮಲ್ ಪ್ರದೇಶದಲ್ಲಿ ಸಮುದ್ರ ಕೊರೆತ ಬಿರುಸುಗೊಂಡಿದ್ದು, ತೃಕನ್ನಾಡು ಪ್ರದೇಶದಲ್ಲಿ ರಾಜ್ಯ ಹೆದ್ದಾರಿಯೂ ಅಪಾಯದಲ್ಲಿದೆ. ಸಮುದ್ರದಿಂದ ಕೆಲವೇ ಮೀಟರ್ ಅಂತರದಲ್ಲಿರುವ ತ್ರಿಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನವೂ ಅಪಾಯದಂಚಿನಲ್ಲಿದೆ. ಈಗಾಗಲೇ ಸನಿಹದ ಭಗವತಿ ಮಂಟಪದ ಗೋಡೆ, ಹೈಮಾಸ್ಟ್ ಬೀದಿ ದೀಪ ಸಮುದ್ರ ಕೊರೆತದಿಂದ ಹಾನಿಗೊಳಗಾಗಿದ್ದು, ಈ ಬಗ್ಗೆ ಶಾಸಕರು ಸಚಿವರಿಗೆ ಮನವರಿಕೆ ಮಾಡಿದರು.
ಸಮುದ್ರ ಕೊರೆತ ತಡೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಪ್ರತಿಭಟನೆಗಳನ್ನು ಆಯೋಜಿಸಿರುವುದಲ್ಲದೆ, ಸ್ಥಳೀಯ ನಿವಾಸಿಗಳು ಉದುಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನಾ ಧರಣಿಯನ್ನೂ ನಡೆಸಿದ್ದರು.





