ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರದ ಉದ್ಯಾವರ ಮಾಡ ಸನಿಹ ಲಾರಿ ಡಿಕ್ಕಿಯಾಗಿ ಷಟ್ಪಥ ಯೋಜನೆಯನ್ವಯ ಅಭಿವೃದ್ಧಿ ಕೆಲಸಗಳಲ್ಲಿತೊಡಗಿಸಿಕೊಂಡಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನೊಬ್ಬ ಗಂಭೀರ ಗಾಐಗೊಂಡಿದ್ದಾರೆ.
ಬಿಹಾರದ ದಾಮೋರ್‍ಪುರ್ ನಿವಾಸಿಗಳಾದ ರಾಜ್‍ಕುಮಾರ್(27)ಹಾಗೂ ರಾಜಸ್ಥಾನದ ಗಣಪಾಲ್ ಬಾಯಿ(25)ಮೃತಪಟ್ಟವರು. ಉತ್ತರ ಪ್ರದೇಶದ ಮಜೇಂದ್ರ ಪ್ರತಾಪ್ ಸಿಂಗ್ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುತ್ತಿಗೆದಾರ ಕಂಪೆನಿಯಾದ ಊರಾಲುಂಗಾಲ್ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಇವರು, ತಮ್ಮ ವಾಹನವನ್ನು ರಸ್ತೆ ಅಂಚಿಗೆ ನಿಲ್ಲಿಸಿ ಸಿಸಿ ಕ್ಯಾಮರಾ ಅಳವಡಿಸುವ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭ ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಇವರಿಗೆ ಡಿಕ್ಕಿಯಾದ ನಂತರ ರಸ್ತೆ ಅಂಚಿಗೆ ನಿಲ್ಲಿಸಿದ್ದ ಇವರ ಲಾರಿಗೂ ಡಿಕ್ಕಿಯಾಗಿ ನಿಂತಿತ್ತು. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




