ನವದೆಹಲಿ: 'ಆಪರೇಷನ್ ಸಿಂಧೂರ ಇನ್ನೂ ಮುಂದುವರೆದಿದ್ದು, ಸೇನೆಯು ದಿನದ 24 ಗಂಟೆಯನ್ನೂ ಒಳಗೊಂಡು ವರ್ಷವಿಡೀ ಸನ್ನದ್ಧವಾಗಿರಬೇಕು' ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ.
ಇಲ್ಲಿನ ಸುಬ್ರತೋ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ರಕ್ಷಣಾ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ಮಿಲಿಟರಿಗೆ ಮಾಹಿತಿ ಯೋಧರು, ತಂತ್ರಜ್ಞಾನ ಯೋಧರು ಮತ್ತು ವಿದ್ವಾಂಸ ಯೋಧರು ಬೇಕಾಗುತ್ತಾರೆ ಎಂದು ಹೇಳಿದರು.
ಯಾವುದೇ ಸಂದರ್ಭದಲ್ಲಿ ಯುದ್ಧ ಆಗಬಹುದಾದ ಈ ಸನ್ನಿವೇಶದಲ್ಲಿ ಭವಿಷ್ಯದ ಸೈನಿಕನು ಮಾಹಿತಿ, ತಂತ್ರಜ್ಞಾನ ಮತ್ತು ವಿದ್ವಾಂಸನಾಗಿರಬೇಕು ಎಂದು ಸಿಡಿಎಸ್ ಹೇಳಿದರು.
ಯುದ್ಧದಲ್ಲಿ ರನ್ನರ್ ಅಪ್ ಇರುವುದಿಲ್ಲ. ಯಾವುದೇ ಮಿಲಿಟರಿ ನಿರಂತರ ಎಚ್ಚರಿಕೆಯಿಂದ ಇರಬೇಕು ಮತ್ತು ಉನ್ನತಮಟ್ಟದ ಕಾರ್ಯಾಚರಣೆಗೆ ಸದಾ ಸನ್ನದ್ಧರಾಗಿರಬೇಕು. ಉದಾಹರಣೆಗೆ ನಮ್ಮ ಆಪರೇಷನ್ ಸಿಂಧೂರ ಈಗಲೂ ಮುಂದುವರಿದಿದೆ. ವರ್ಷದ 365 ದಿನ, ದಿನದ 24 ಗಂಟೆಯೂ ನಾವು ಸಜ್ಜಾಗಿರಬೇಲು ಎಂದಿದ್ದಾರೆ.
ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಮೇ 7ರಂದು ಆಪರೇಷನ್ ಸಿಂಧೂರ ಆರಂಭಿಸಿದ್ದ ಭಾರತೀಯ ಸೇನೆ, ಪಾಕಿಸ್ತಾನದಲ್ಲಿ ಉಗ್ರರ ಪ್ರಮುಖ ನೆಲೆಗಳನ್ನು ಧ್ವಂಸ ಮಾಡಿತ್ತು.




