HEALTH TIPS

ಸ್ವಾರ್ಥಿಯಾಗಲಾರೆ..: ಮಗನೂ ಸೇನೆ ಸೇರಿದ್ದಕ್ಕೆ ಕಾರ್ಗಿಲ್ ಹುತಾತ್ಮನ ಮಡದಿ ಹೇಳಿಕೆ

ಕಾರ್ಗಿಲ್‌: ವಿನೋದ್‌ ಕನ್ವಾರ್ ಅವರ ಪತಿ, ವೀರ ಯೋಧ ನಾಯಕ್‌ ಭನ್ವರ್‌ ಸಿಂಗ್‌ ರಾಥೋಡ್‌ ಅವರು 1999ರ ಕಾರ್ಗಿಲ್‌ ಕದನದಲ್ಲಿ ಹುತಾತ್ಮರಾದರು. ಆಗ ಕನ್ವಾರ್‌ ಅವರ ವಯಸ್ಸು ಕೇವಲ 20. ಪತಿಯನ್ನು ಕಳೆದುಕೊಂಡು ಅಪಾರ ನೋವು ಅನುಭವಿಸಿದರೂ, ಅವರು ತಮ್ಮ ಮಗನನ್ನೂ ಸೇನೆಗೆ ಕಳುಹಿಸಿದ್ದಾರೆ.

ಕಾರ್ಗಿಲ್‌ ವಿಜಯ ದಿವಸದ ಮುನ್ನಾದಿನ ಹುತಾತ್ಮ ಯೋಧರ ಕುಟುಂಬಗಳಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದ ವೇಳೆ ಮಾತನಾಡಿರುವ ಕನ್ವಾರ್, 'ನಾವು ರಾಷ್ಟ್ರದ ಬಗ್ಗೆ ಯೋಚಿಸಬೇಕು. ಅದನ್ನು ರಕ್ಷಿಸಬೇಕು. ನಾವು ಸ್ವಾರ್ಥಿಗಳಾಗಬಾರದು' ಎಂದು ಹೇಳಿದ್ದಾರೆ.

ರಾಥೋಡ್‌ ಅವರು, ಕಾರ್ಗಿಲ್‌ ಕದನದ ವೇಳೆ 'ಪಾಯಿಂಟ್‌ 4700' ಪ್ರದೇಶ ಮರಳಿ ವಶಕ್ಕೆ ಪಡೆದ ಬಳಿಕ 1999ರ ಜುಲೈ 10ರಂದು ಹುತಾತ್ಮರಾದರು. ಈ ದಂಪತಿಯ ಪುತ್ರ ತೇಜವೀರ್‌ ಸಿಂಗ್‌ ರಾಥೋಡ್‌ ಅವರ ವಯಸ್ಸು ಆಗ ಒಂದು ವರ್ಷವೂ ಪೂರ್ಣಗೊಂಡಿರಲಿಲ್ಲ. ಇದೀಗ, ತೇಜವೀರ್‌ ಕೂಡ ಸೇನೆಗೆ ಸೇರಿದ್ದಾರೆ.

ಡೆಹರಾಡೂನ್‌ನಲ್ಲಿರುವ ಭಾರತೀಯ ಸೇನಾ ಅಕಾಡೆಮಿಯಲ್ಲಿ ತೇಜವೀರ್‌ ತರಬೇತಿ ಪಡೆಯುತ್ತಿದ್ದಾರೆ ಎಂದು ಕನ್ವಾರ್‌ ತಿಳಿಸಿದ್ದಾರೆ.

'ತನ್ನ ತಂದೆ ಹುತಾತ್ಮರಾದಾಗ ತೇಜವೀರ್‌ ಸಿಂಗ್‌ ರಾಥೋಡ್‌ಗೆ ಕೇವಲ 6 ತಿಂಗಳಾಗಿತ್ತು. ಆತ ತನ್ನ ಅಪ್ಪನ ಮುಖವನ್ನೂ ನೋಡಿಲ್ಲ' ಎಂದು ಅವರು ಹೇಳಿದ್ದಾರೆ.

ಮಗನನ್ನು ಸೇನೆಗೆ ಸೇರಿಸುವುದಕ್ಕೆ ಹಿಂದೇಟು ಹಾಕಿದ್ದಿರಾ ಎಂಬ ಪ್ರಶ್ನೆಗೆ, ಅಂತಹ ಯಾವುದೇ ಆಲೋಚನೆ ಇರಲಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.

'ನಮ್ಮ ಕುಟುಂಬದವರ ಪೈಕಿ ಸೇನೆಗೆ ಸೇರಿದ ಮೂರನೇ ತಲೆಮಾರಿನವ ತೇಜವೀರ್‌. ನನ್ನ ತಂದೆಯೂ ಯೋಧರಾಗಿದ್ದವರು. ನನ್ನ ಪತಿ ದೇಶಕ್ಕಾಗಿ ಮಡಿದವರು. ನನ್ನ ಪುತ್ರ ಕೂಡ ರಾಷ್ಟ್ರ ಸೇವೆ ಮಾಡಲಿದ್ದಾನೆ' ಎಂದು ಹೇಳಿದ್ದಾರೆ.

ತಮ್ಮ ಪತಿಯನ್ನು ಕಳೆದುಕೊಂಡದ್ದು ಇಡೀ ಕುಟುಂಬಕ್ಕೆ ಭಾರಿ ನೋವು ನೀಡಿತು ಎಂದರೂ, 'ದೇಶಕ್ಕಾಗಿ ಅವರು ಪ್ರಾಣ್ಯ ತ್ಯಾಗ ಮಾಡಿದ್ದಕ್ಕೆ ಹೆಮ್ಮೆ ಇದೆ' ಎಂದು ಸಾರ್ಥಕ ಭಾವದಿಂದ ಹೇಳಿದ್ದಾರೆ.

ರಾಜಸ್ಥಾನ ನಾಗೌರ್‌ ಜಿಲ್ಲೆಯ ಹಿರಾಸನಿ ಗ್ರಾಮದಲ್ಲಿ 1977ರ ಸೆಪ್ಟೆಂಬರ್‌ 3ರಂದು ಜನಿಸಿದ್ದ ರಾಥೋಡ್ ಅವರು, 1994ರ ಡಿಸೆಂಬರ್‌ನಲ್ಲಿ ಸೇನೆಗೆ ಸೇರಿದ್ದರು.

ಪ್ರತಿ ವರ್ಷ ಜುಲೈ 26 ಅನ್ನು ಕಾರ್ಗಿಲ್‌ ವಿಜಯ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತೀಯ ಸೇನೆಯು, ಕಾರ್ಗಿಲ್‌ನ ಹಿಮಚ್ಛಾದಿತ ಪ್ರದೇಶ ಸೇರಿದಂತೆ, ಟೊಲೊಲಿಂಗ್‌, ಟೈಗರ್‌ ಹಿಲ್‌ನಂತಹ ಎತ್ತರದ ಪ್ರದೇಶಗಳಲ್ಲಿ ಸತತ ಮೂರು ತಿಂಗಳು ನಡೆಸಿದ 'ಆಪರೇಷನ್‌ ವಿಜಯ' ಕಾರ್ಯಾಚರಣೆಯಲ್ಲಿ ಜಯ ಸಾಧಿಸಿರುವುದಾಗಿ 1999ರ ಆ ದಿನ ಘೋಷಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries