ಮುಖದ ಮೇಲಿನ ಮೊಡವೆಗಳು ಸೌಂದರ್ಯ ಹಾಳುಮಾಡುವ ಜೊತೆಗೆ ನೋವನ್ನೂ ತರುತ್ತವೆ. ಕೆಲವರಿಗೆ ಆಗಾಗ ಒಂದು ಮೊಡವೆ ಎದ್ದು, ಅಲ್ಲೇ ಕಡಿಮೆಯಾಗುತ್ತದೆ. ಆದರೆ ಇನ್ನೂ ಕೆಲವರಿಗೆ ಮುಖದ ತುಂಬ ಮೊಡವೆಗಳು ಏಳುತ್ತವೆ. ಅದರಲ್ಲೂ ಮಳೆಗಾಲದ ಹ್ಯುಮಿಡಿಟಿ ಜಾಸ್ತಿ ಇರೋದ್ರಿಂದ ಮೊಡವೆಗಳೂ ಜಾಸ್ತಿಯಾಗುತ್ತವೆ.
ಮೊಡವೆಗಳು ಸಂಪೂರ್ಣವಾಗಿ ಕಡಿಮೆ ಆಗ್ಬೇಕು ಅಂದ್ರೆ ನೀವು ಬೇವು ಮತ್ತು ಅರಿಶಿಣ ಮಿಶ್ರಿತ ಫೇಸ್‌ಪ್ಯಾಕ್‌ನ್ನ ಮಾಡಿಕೊಳ್ಳಿ. ಇವೆರಡೂ ಕೂಡ ಮೊಡವೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅರಿಶಿಣ ಮತ್ತು ಬೇವಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ವಿರೋಧಿ ಮತ್ತು ಗುಣಪಡಿಸುವ ಸಂಕೀರ್ಣಗಳು ಇರುತ್ತವೆ. ಇವೆರಡನ್ನೂ ಬಳಸಿ ನೀವು ಫೇಸ್‌ಪ್ಯಾಕ್ ಮಾಡಿಕೊಂಡರೆ ಚರ್ಮದ ಮೇಲಿನ ಮೊಡವೆ, ಕಲೆಗಳೆಲ್ಲ ಮಾಯವಾಗುತ್ತದೆ. ಅರಿಶಿಣ-ಬೇವು ಮಿಶ್ರಿತ ಫೇಸ್‌ಪ್ಯಾಕ್ ತಯಾರಿಸಿ, ಮುಖಕ್ಕೆ ಹಚ್ಚಿಕೊಳ್ಳುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು
1 ಟೇಬಲ್ ಸ್ಪೂನ್ ಬೇವಿನ ಪುಡಿ, ಅರ್ಧ ಟೀಸ್ಪೂನ್ ಅರಿಶಿಣ ಪುಡಿ, 1 ಟೇಬಲ್ ಸ್ಪೂನ್ ಜೇನುತುಪ್ಪ, 2-3 ಟೇಬಲ್ ಸ್ಪೂನ್ ರೋಸ್ ವಾಟರ್.
ತಯಾರಿಸೋದು ಹೇಗೆ?
- ಒಂದು ಸ್ವಚ್ಛವಾದ ಪಾತ್ರೆಯಲ್ಲಿ ಬೇವಿನ ಪುಡಿ-ಅರಿಶಿಣ ಪುಡಿ ಹಾಕಿ. ಅದಕ್ಕೆ ಜೇನುತುಪ್ಪ, ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಈ ಮಿಶ್ರಣ ನುಣ್ಣಗೆ ಮಿಕ್ಸ್ ಮಾಡಬೇಕು. ಗಂಟುಗಳು ಇರಬಾರದು. ಹಾಗೇ ತುಂಬ ತೆಳುವಾಗಬಾರದು. ಮುಖಕ್ಕೆ ಹಚ್ಚುವಷ್ಟು ದಪ್ಪ ಇರಬೇಕು.
- ಹೀಗೆ ನುಣ್ಣಗೆ ಮಿಕ್ಸ್ ಮಾಡಿಕೊಳ್ಳುವಾಗ ಅಗತ್ಯಬಿದ್ದರೆ ಇನ್ನೂ ಸ್ವಲ್ಪ ರೋಸ್‌ವಾಟರ್ ಸೇರಿಸಿಕೊಳ್ಳಿ. ಒಟ್ನಲ್ಲಿ ನುಣ್ಣನೆ ಪೇಸ್ಟ್ ಮಾಡಿಕೊಳ್ಳಬೇಕು..

ಮುಖಕ್ಕೆ ಹಚ್ಚೋದು ಹೇಗೆ?
- ಮೊದು ನಿಮ್ಮ ಮುಖ, ಕುತ್ತಿಗೆ ಭಾಗವನ್ನೆಲ್ಲ ಚೆನ್ನಾಗಿ ತೊಳೆದುಕೊಳ್ಳಿ. ಅದಕ್ಕೆ ಸೌಮ್ಯವಾದ ಕ್ಲೆನ್ಸರ್ ಬಳಸಿ. ನಂತರ ಒಣ ಬಟ್ಟೆಯಲ್ಲಿ ಒರೆಸಿ. ಗಟ್ಟಿಯಾಗಿ ಒರೆಸಬಾರದು.
- ಅದಾದ ಬಳಿಕ ಕೈಬೆರಳುಗಳು ಅಥವಾ ಬ್ರಷ್ ಮೂಲಕ ಅರಿಶಿಣ-ಬೇವಿನ ಮಿಶ್ರಣವನ್ನ ಮುಖಕ್ಕೆ-ಕುತ್ತಿಗೆಗೆ ಹಚ್ಚಿಕೊಳ್ಳಿ. ಈ ಮಿಶ್ರಣವನ್ನ ತುಟಿಗಳು, ಕಣ್ಣುಗಳಿಗೆ ತಗುಲಿಸಬೇಡಿ.
- ಮುಖಕ್ಕೆ ಈ ಪೇಸ್ಟ್ ಹಚ್ಚಿ ಸುಮಾರು 15-20 ನಿಮಿಷ ಬಿಡಿ. ಇದು ಸುಮಾರು ಶೇ.80ರಷ್ಟು ಒಣಗಬೇಕು. ಅದಾದ ಬಳಿಕ ನಿಮ್ಮ ಕೈ ಒದ್ದೆ ಮಾಡಿಕೊಂಡು ಮುಖದ ಮೇಲೆ ವೃತ್ತಕಾರವಾಗಿ ಮಸಾಜ್ ಮಾಡಿಕೊಳ್ಳಿ.
- ಒಣಗಿದ ಕ್ರೀಮ್ ಎಲ್ಲ ಉದುರಿ ಬೀಳುತ್ತದೆ. ಬಳಿಕ ತಣ್ಣನೆಯ ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಳ್ಳಿ. ನಂತರ ನಿಮ್ಮ ಚರ್ಮಕ್ಕೆ ಹೊಂದುವ ಮಾಯಿಶ್ಚರೈಸರ್ ಹಚ್ಚಿ. ನೀವಿದನ್ನ ವಾರಕ್ಕೆ ಎರಡು ಬಾರಿಯಾದರೂ ಮಾಡಿದರೆ ಮೊಡವೆಗಳಿಂದ ಮುಕ್ತಿ ಪಡೆಯಬಹುದು.




