ಕುಂಬಳೆ: ಮಂಜೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಏಳನೇ ವಾರ್ಡ್ ಮಚ್ಚಂಪಾಡಿ ಕಿಟ್ಟನಗುಂಡಿಯಲ್ಲಿ ಜಿಲ್ಲಾ ಪಂಚಾಯತಿ ನಿಧಿಯಿಂದ ಜಾರಿಗೆ ತರಲಾಗುತ್ತಿರುವ ತ್ಯಾಜ್ಯ ಘಟಕಕ್ಕೆ ಅವಕಾಶ ನೀಡಲಾಗದು ಎಂದು ಎಸ್‍ಡಿಪಿಐ ಪದಾಧಿಕಾರಿಗಳು ಕುಂಬಳೆಯಲ್ಲಿ ಶನಿವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಪಕ್ಷವು ಬಲವಾದ ಪ್ರತಿಭಟನೆ ಮತ್ತು ಕಾನೂನು ಹೋರಾಟದೊಂದಿಗೆ ಮುಂದುವರಿಯಲಿದೆ. ಶಾಲೆಗಳು, ದೇವಾಲಯಗಳು, ಮಸೀದಿಗಳು ಮತ್ತು ಮದರಸಾಗಳು ಇರುವ ವಸತಿ ಪ್ರದೇಶದಲ್ಲಿ ತ್ಯಾಜ್ಯ ಘಟಕವು ಸಾಕಾರಗೊಂಡರೆ ನಂತರ ಸಂಚಾರ ದಟ್ಟಣೆ, ವಾಯು ಮತ್ತು ಜಲ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಜನರ ಕಳವಳವನ್ನು ತಳ್ಳಿಹಾಕಿದ ಯೋಜನೆಯ ಅಧಿಕೃತರು, ವಾರ್ಡ್ ಸದಸ್ಯರು ಮತ್ತು ಗ್ರಾಮ ಪಂಚಾಯತಿ ಆಡಳಿತ ಸಮಿತಿಯ ಒಪ್ಪಿಗೆಯೊಂದಿಗೆ ಜಿಲ್ಲಾ ಪಂಚಾಯತಿ ನಿಧಿಯಿಂದ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಹೇಳಲಾಗುವ ತ್ಯಾಜ್ಯ ಘಟಕವನ್ನು ಯಾವುದೇ ಕಾರಣಕ್ಕೂ ಅನುಮತಿಸಲಾಗದು ಎಂದು ಹೇಳಿದರು.
ಈ ನಿಟ್ಟಿನಲ್ಲಿ ಪಕ್ಷವು ಸೋಮವಾರ ಬೆಳಿಗ್ಗೆ 10:30 ಕ್ಕೆ ಮಂಜೇಶ್ವರ ಗ್ರಾಮ ಪಂಚಾಯತಿಗೆ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಿದೆ. ನಂತರ ಸ್ಥಳೀಯರೊಂದಿಗೆ ಕಾನೂನು ಹೋರಾಟ ಮತ್ತು ಪ್ರತಿಭಟನೆಯಲ್ಲಿ ಪಕ್ಷವು ಮುಂಚೂಣಿಯಲ್ಲಿರುತ್ತದೆ. ಸ್ಥಳೀಯರೆಲ್ಲರೂ ಪ್ರತಿಭಟನೆಯಲ್ಲಿ ಸೇರುವಂತೆ ನಾಯಕರು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಅಶ್ರಫ್ ಬಡಾಜೆ, ಶರೀಫ್ ಪಾವೂರು, ಬಿ.ಕೆ.ಮೊಯ್ದೀನ್ ಹಾಜಿ, ಅಶ್ರಫ್ ಮಚ್ಚಂಪಾಡಿ, ಮುಸ್ತಫಾ ಕೋಡಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.




.jpg)
