ಕಾಸರಗೋಡು: ಮಧೂರು ಸನಿಹದ ಪರಕ್ಕಿಲದಲ್ಲಿ ಗಂಭೀರಗಾಯಗೊಂಡು ರಸ್ತೆಬದಿ ಬಿದ್ದಿದ್ದ ವ್ಯಕ್ತಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಧೂರು ಕೋಡಿಮಜಲು ನಿವಾಸಿ ಚನಿಯ-ಲೀಲಾ ದಂಪತಿ ಪುತ್ರ ಚಂದ್ರaಹಾಸ ಎಂ(49)ಸಾವನ್ನಪ್ಪಿದ ವ್ಯಕ್ತಿ. ಜು. 18ರಂದು ಚಂದ್ರಹಾಸ ತಲೆಗೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇವರನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಿ ಮನೆಗೆ ಕರೆತರಲಾಗಿತ್ತು. ಬಿದ್ದು ಗಾಯಗೊಂಡಿರಬೇಕೆಂದು ಮನೆಯವರು ಸಂಶಯಿಸಿದ್ದರು. ಒಂದೆರಡು ದಿವಸದಲ್ಲಿ ಆರೋಗ್ಯ ಸ್ಥಿತಿ ಗಂಭೀರಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ ಇವರನ್ನು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ಹಾಗೂ ಅಲ್ಲಿಂದ ಮತ್ತೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ತಪಾಸಣೆ ನಡೆಸಿದಾಗ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿತ್ತು. ಆದರೆ ಅಲ್ಲಿ ತಜ್ಞ ವೈದ್ಯರ ಸೇವೆ ಲಭ್ಯವಾಗದ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆತಂದರೂ, ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಮನೆಗೆ ಕರೆತಂದಿದ್ದರು. ಜು. 20ರಂದು ಮೃತಪಟ್ಟಿದ್ದ ಇವರ ಅಂತ್ಯ ಸಂಸ್ಕಾರ ನಡೆಸಿದ ನಂತರ ಸಂಶಯದಿಂದ ಇವರು ಬಿದ್ದಿದ್ದ ಪ್ರದೇಶದ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಬೈಕ್ ಡಿಕ್ಕಿಯಾಗಿ ಚಂದ್ರಹಾಸ ರಸ್ತೆಗೆ ಬಿದ್ದಿರುವುದು ಕಂಡು ಬಂದಿತ್ತು. ಸಿಸಿ ಕ್ಯಾಮರಾ ಫೂಟೇಜ್ ಒಳಗೊಂಡಂತೆ ವಿದ್ಯಾನಗರ ಠಾಣೆ ಪೊಲೀಸರಿಗೆ ನೀಡಿದ ದೂರಿನನ್ವಯ ಅಪಘಾತ ನಡೆಸಿರುವ ಬೈಕಿನ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.




