ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾನೆ ವ್ಯಾಪ್ತಿಯ ಚೆಂಗಳ ಸಮೀಪದ ನಾಲ್ಕನೇಮೈಲಿಗಲ್ಲಿನಲ್ಲಿ ಕ್ವಾಟ್ರಸ್‍ನೊಳಗೆ ತಾಯಿಯ ಬಟ್ಟೆಯನ್ನು ಉಯ್ಯಾಲೆಯನ್ನಾಗಿಸಿ ಆಟವಾಡುತ್ತಿದ್ದ ವೇಳೆ ಕತ್ತಿಗೆ ಬಿಗಿದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ. ಮೂಲತ: ಆಂಧ್ರಪ್ರದೇಶ ಪಾಕಲ ತಾಲೂಕು ಧಮಲಚೆರುವು ಇಂದಿರಾನಗರ ನಿವಾಸಿ ಸಯ್ಯದ್ ಮಸ್ತಾನ್-ನಸ್ರೀನ್ ದಂಪತಿ ಪುತ್ರ ಉಮ್ಮರ್ ಫಾರೂಕ್(12)ಮೃತಪಟ್ಟ ಬಾಲಕ. ಉಮ್ಮರ್‍ಫಾರೂಕ್ ಮನೆಯೊಳಗೆ ಬಟ್ಟೆಯಲ್ಲಿ ತಯಾರಿಸಿದ್ದ ಉಯ್ಯಾಲೆಯಲ್ಲಿ ಆಟವಾಡುತ್ತಿದ್ದರೆ, ಈತನ ಇಬ್ಬರು ಸಹೋದರಿಯರು ಮನೆಯಿಂದ ಹೊರಗೆ ಆಟವಾಡುತ್ತಿದ್ದರು. ಉಯ್ಯಾಲೆಯಲ್ಲಿ ಆಟವಾಡುತ್ತಿದ್ದ ಬಾಲಕನ ಕತ್ತಿಗೆ ಕುಣಿಕೆ ಬಿಗಿದು ಚಡಪಡಿಸುತ್ತಿದ್ದ ಸಂದರ್ಭ ಮನೆಯವರು ಆಗಮಿಸಿದ್ದು, ತಕ್ಷಣ ಬಟ್ಟೆ ಕುಣಿಕೆ ತುಂಡರಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಬಾಲಕನ ಹೆತ್ತವರು ಮಕ್ಕಳೊಂದಿಗೆ ಮೂರು ವರ್ಷದ ಹಿಂದೆ ಕೇರಳಕ್ಕೆ ಆಗಮಿಸಿದ್ದು, ಆರು ತಿಂಗಳ ಹಿಂದೆ ಕಾಸರಗೋಡಿನ ಚೆಂಗಳಕ್ಕೆ ಆಗಮಿಸಿದ್ದರು.




