ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿನ ಉಂಟಾಗಿರುವ ಲೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದು ಮತ್ತು ಹಾನಿಗೊಳಗಾದವರಿಗೆ ಪರಿಹಾರವನ್ನು ಒದಗಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಕಾಸರಗೋಡು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.
ಚೆಂಗಳ-ನೀಲೇಶ್ವರ ವಿಭಾಗದ ರಸ್ತೆನಿರ್ಮಾಣಕಾರ್ಯದಲ್ಲಿ ಕೆಲವು ಸಮಸ್ಯೆಗಳು ಕಂಡುಬಂದಿರುವುದರಿಂದ ಗುತ್ತಿಗೆದಾರ ಕಂಪನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ಕಚೇರಿಯಿಂದ ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಲಾಯಿತು. 11 ಮತ್ತು 12 ರಂದು ನಿರ್ಮಾಣ ಸ್ಥಳಗಳನ್ನು ಪರಿಶೀಲಿಸಲಾಗಿದೆ ಎಂದು ಎನ್‍ಎಚ್‍ಎಐ ಯೋಜನಾ ನಿರ್ದೇಶಕರು ಮಾಹಿತಿ ನೀಡಿದರು. ಸಮಸ್ಯೆ ನಿವಾರಣೆಗಾಗಿ ಕೈಗೆತ್ತಿಕೊಂಡಿರುವ ವಿಧಾನಗಳು ಸೂಕ್ತವೇ ಎಂದು ಪರಿಶೀಲಿಸಲು ಮತ್ತು ಅವುಗಳನ್ನು ಮತ್ತಷ್ಟು ಸುಧಾರಿಸಲು ತಜ್ಞರ ಸಮಿತಿ ರಚಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಯೋಜನಾ ನಿರ್ದೇಶಕರು ತಿಳಿಸಿದರು. ಜಿಲ್ಲಾ ಅಭಿವೃದ್ಧಿ ಸಮಿತಿಯು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಎನ್‍ಎಚ್‍ಎಐ ಯೋಜನಾ ನಿರ್ದೇಶಕರು ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ ಪೀಡಿತ ಪ್ರದೇಶಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಬೇಕು ಎಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಸೂಚಿಸಲಾಯಿತು.
ಅಲೈನ್‍ಮೆಂಟ್ ಪೂರ್ತಿಗೊಳಿಸಿ:
ಜಿಲ್ಲೆಯ ಕರಾವಳಿ ಹೆದ್ದಾರಿಯ ಅಲೈನ್‍ಮೆಂಟ್ ಶೀಘ್ರ ಪೂರ್ತಿಗೊಳಿಸಿ ಕಾಮಗಾರಿಯ ಮುಂದಿನ ಹಂತಕ್ಕೆ ಸಾಗುವಂತೆ ಶಾಸಕ ಸಿ.ಎಚ್. ಕುಂಞಂಬು ತಿಳಿಸಿ, ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು. ಜಿಲ್ಲೆಯಲ್ಲಿ ಕರಾವಳಿ ಹೆದ್ದಾರಿಯ ಜೋಡಣೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ, ಕಾಞಂಗಾಡು ಕ್ಷೇತ್ರದಲ್ಲಿ ಒಟ್ಟು 14.92 ಕಿಲೋಮೀಟರ್‍ಗಳಲ್ಲಿ 4.3 ಕಿಲೋಮೀ. ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಕಲ್ಲು ಅಳವಡಿಸುವ ಕೆಲಸ ಪೂರ್ಣಗೊಂಡಿದೆ. ಹೆದ್ದಾರಿ ನಿರ್ಮಾಣದಿಂದ ನಷ್ಟಗೊಳ್ಳುವ ಮನೆಗಳ ಸಂಖ್ಯೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಅಲೈನ್‍ಮೆಂಟ್ ಪುನಾರಚಿಸುವ ಬಗ್ಗೆ ಐಡಿಇಸಿಕೆಗೆ ಕಿಫ್‍ಬಿ ನಿರ್ದೇಶ ನೀಡಿದೆ. ಕೆಐಐಎಫ್‍ಬಿಯಿಂದ ಅಲೈನ್‍ಮೆಂಟ್ ಪರಿಶೀಲಿಸಿ ಅನುಮೋದನೆ ಪಡೆದ ನಂತರ ಶಿಲಾನ್ಯಾಸ ಕಾರ್ಯ ಪೂರ್ಣಗೊಳ್ಳಲಿದ್ದು, ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೆಆರ್‍ಎಫ್‍ಬಿ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಎಡಿಎಂ ಪಿ.ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಂ.ರಾಜಗೋಪಾಲನ್, ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು ಮೊದಲಾದವರು ಉಪಸ್ಥಿತರಿದ್ದರು.


