ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಜೋಡುಕಲ್ಲು ಶಾಂತಿಯೋಡು ಎಂಬಲ್ಲಿ ಮನೆಯವರು ಮಲಗಿ ನಿದ್ರಿಸುತ್ತಿದ್ದಂತೆ ಕಳವಿಗೆ ಯತ್ನಿಸಿದ ವ್ಯಕ್ತಿಯನ್ನು ತಾಸುಗಳೊಳಗೆ ಪೊಲೀಸರು ಬಂಧಿಸಿದ್ದಾರೆ. ಶಾಂತಿಯೋಡು ಕೆ.ಕೆ ನಗರ ನಿವಾಸಿ ಹಾಗೂ ಕುಬಣೂರಿನ ಸಫಾ ನಗರದ ಕ್ವಾಟ್ರಸ್ ಒಂದರಲ್ಲಿ ವಾಸಿಸುತ್ತಿರುವ ಕಲಂದರ್ ಶಾಫಿ(34)ಬಂಧಿತ. ಕುಂಬಳೆ ಠಾಣೆ ಎಸ್.ಐ ಶ್ರೀಜೇಶ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.
ಶುಕ್ರವಾರ ನಸುಕಿಗೆ ಘಟನೆ ನಡೆದಿದೆ. ಮನೆಯವರು ಮಲಗಿದ್ದ ಸಂದರ್ಭ ಒಳನುಗ್ಗಿದ ಈತ, ಕೊಠಡಿಯೊಳಗೆ ತೆರಳುವ ಮಧ್ಯೆ, ಮಲಗಿದ್ದ ಮಗುವಿನ ಕೈಗೆ ತುಳಿದ ಹಿನ್ನೆಲೆಯಲ್ಲಿ ಮಗು ಜೋರಾಗಿ ಅಳಲಾರಂಭಿಸಿದೆ. ಈ ಸಂದರ್ಭ ಮನೆಯವರು ಎಚ್ಚೆತ್ತುಕೊಳ್ಳುತ್ತಿದ್ದಂತೆ ಈತ ಮನೆಯಿಂದ ಪರಾರಿಯಾಗಿ ಮನೆ ಹೊರಗೆ ನಿಲ್ಲಿಸಿದ್ದ ಆಟೋರಿಕ್ಷಾದಲ್ಲಿ ಪರಾರಿಯಾಗಿದ್ದಾನೆ. ತಕ್ಷಣ ಮನೆಯವರು ನೀಡಿದ ದೂರಿನನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮನೆ ಸನಿಹದ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಆರೋಪಿ ಬಗ್ಗೆ ಮಾಹಿತಿ ಲಭಿಸಿದ್ದು, ಶುಕ್ರವಾರ ರಾತ್ರಿ ಸಫಾ ನಗರದಿಂದ ಈತನನ್ನು ಬಂಧಿಸಲಾಗಿದೆ. ಈತ ಸಂಚಾರಕ್ಕೆ ಬಳಸಿದ್ದ ಆಟೋರಿಕ್ಷಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

