ಕಾಸರಗೋಡು: ಕಾರಡ್ಕ ಕೃಷಿ ಸಹಕಾರಿ ಸಂಘದಲ್ಲಿ ನಡೆದಿರುವ ವಂಚನಾ ಪ್ರಕರಣದ ಎಂಟನೇ ಆರೋಪಿ, ಬಿಜೆಪಿ ಮುಖಂಡ ಅಜಯ್‍ಕುಮಾರ್ ನೆಲ್ಲಿಕ್ಕಾಡ್ ಎಂಬಾತ ಕಾಸರಗೋಡು ಜ್ಯುಡಿಶಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟರ ನ್ಯಾಯಾಲಯ(ಪ್ರಥಮ)ಕ್ಕೆ ಶರಣಾಗಿದ್ದಾನೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕಾರಡ್ಕ ಕೃಷಿ ಸಹಕಾರಿ ಸಂಘದ ಕಾರ್ಯದರ್ಶಿ, ಸಿಪಿಎಂ ಸ್ಥಳೀಯ ಸಮಿತಿ ಮಾಜಿ ಕಾರ್ಯದರ್ಶಿ ಕರ್ಮಂತೋಡಿ ನಿವಾಸಿ ರತೀಶನ್ ಸಹಕಾರಿ ಸಂಘದಿಂದ ಎಗರಿಸಿರುವ ಚಿನ್ನಾಭರಣವನ್ನು ಬೇರೆಡೆ ಅಡವಿರಿಸುವಲ್ಲಿ ಅಜಯ್‍ಕುಮಾರ್ ಶಾಮೀಲಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಶಾಮೀಲಾಗಿದ್ದ ಅಜಯ್‍ಕುಮಾರ್ ಸಹೋದರ ಅನಿಲ್‍ಕುಮಾರ್‍ನನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು.
ಕಾರಡ್ಕ ಕೃಷಿ ಸಹಕಾರಿ ಸಂಘದಲ್ಲಿ ನಡೆದಿರುವ ವಂಚನಾ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್‍ನ ಆರ್ಥಿಕ ಅಪರಾಧ ತನಿಖಾ ವಿಭಾಗ ನಡೆಸುತ್ತಿದೆ. ಸಿಪಿಎಂ ನಿಯಂತ್ರಣದಲ್ಲಿರುವ ಕೃಷಿ ಸಹಕಾರಿ ಸಂಘದಲ್ಲಿ ಅದರ ಸದಸ್ಯರು ಅಡವಿರಿಸಿದ್ದ 4.76ಕೋಟಿ ರೂ. ಮೊತ್ತದ ಚಿನ್ನಾಭರಣವನ್ನು ಕಾರ್ಯದರ್ಶಿ ರತೀಶನ್ ನೇತೃತ್ವದಲ್ಲಿ 2024 ಮೇ 14ರಂದು ಸಹಕಾರಿ ಸಂಘದಿಂದ ಕೊಂಡೊಯ್ದು ಹಲವರ ಹೆಸರಲ್ಲಿ ಬೇರೆ ಹಲವು ಬ್ಯಾಂಕುಗಳಲ್ಲಿ ಅಡವಿರಿಸಿ ಹಣ ಪಡೆದು ವಂಚಿಸಿರುವ ಬಗ್ಗೆ ಕೇಸು ದಾಖಲಾಗಿತ್ತು. ಪ್ರಕರಣದಲ್ಲಿ ಹನ್ನೊಂದು ಮಂದಿ ಆರೋಪಿಗಳಿದ್ದು, ಕಾರ್ಯದರ್ಶಿ ರತೀಶನ್ ಪ್ರಥಮ ಆರೋಪಿಯಾಗಿದ್ದಾನೆ.

