ಶ್ರೀನಗರ: ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯಿಂದ ಜಮ್ಮು-ಕಾಶ್ಮೀರದಲ್ಲಿ ತೊಂದರೆಗೀಡಾದ ಕುಟುಂಬಗಳ ಸಹಾಯಕ್ಕಾಗಿ ವಿಶೇಷ ಘಟಕವನ್ನು ಸ್ಥಾಪಿಸುವುದರ ಜತೆಗೆ ಟೋಲ್ ಫ್ರೀ ನಂಬರ್ ಅನ್ನು ಶೀಘ್ರವೇ ಪರಿಚಯಿಸುವುದಾಗಿ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಘೋಷಿಸಿದ್ದಾರೆ.
ಅಲ್ಲದೇ, ಬಲವಂತವಾಗಿ ಮುಚ್ಚಿಹಾಕಿರುವ ಭಯೋತ್ಪಾದಕ ಪ್ರಕರಣಗಳನ್ನು ಮತ್ತೆ ತೆರೆದು ಅಪರಾಧಿಗಳಿಗೆ ಶಿಕ್ಷೆ ಖಾತರಿಪಡಿಸಿ, ನೊಂದವರಿಗೆ ನ್ಯಾಯ ದೊರಕಿಸಿಕೊಡುವಂತೆ ಉಪ ಪೊಲೀಸ್ ಕಮಿಷನರ್ ಎಸ್‌ಎಸ್‌ಪಿಗಳಿಗೆ ಸಿನ್ಹಾ ಆದೇಶ ನೀಡಿದ್ದಾರೆ.
ಭಯೋತ್ಪಾದಕ ದಾಳಿಗಳಿಗೆ ಬಲಿಯಾದ ಕಾಶ್ಮೀರಿಗಳ ಕುಟುಂಬವನ್ನು ಸಿನ್ಹಾ ಭಾನುವಾರ ಭೇಟಿಯಾಗಿ, ಅವರ ಸಂಕಷ್ಟ ಆಲಿಸಿದ್ದರು.
ಇದೀಗ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, 'ಸಂತ್ರಸ್ತ ಕುಟುಂಬಗಳ ಸಹಾಯಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ಕಾರ್ಯಾಲಯದಲ್ಲಿ ಒಂದು ವಿಶೇಷ ಘಟಕ ಸ್ಥಾಪಿಸಲಾಗುತ್ತದೆ. ಜತೆಗೆ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲೂ ವಿಶೇಷ ಘಟಕ ಸ್ಥಾಪಿಸಿ, ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನೂ ಕುಟುಂಬಗಳಿಗೆ ಒದಗಿಸಿಕೊಡಲಾಗುವುದು' ಎಂದಿದ್ದಾರೆ.
ಇದಲ್ಲದೇ, ಭಯೋತ್ಪಾದಕರು ವಶಪಡಿಸಿಕೊಂಡಿರುವ ಕಾಶ್ಮೀರಿಗಳ ಆಸ್ತಿ-ಪಾಸ್ತಿಗಳನ್ನು ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಅವರು, ಭಯೋತ್ಪಾದಕರ ಜತೆಗೆ ಉಗ್ರರನ್ನು ಪ್ರೋತ್ಸಾಹಿಸುವವರನ್ನೂ ಬಂಧಿಸುವಂತೆ ನಿರ್ದೇಶಿಸಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಅಂಥವರು ಇದ್ದಾರೆಯೇ ಎಂಬುದನ್ನು ಪರಿಶೀಲಿಸುವಂತಯೂ ಹೇಳಿದ್ದಾರೆ.




