ಕುಂಬಳೆ: ಶಾಲೆಗೆಂದು ತೆರಳಿ, ರೈಲನ್ನೇರಿ ಊರು ಬಿಡಲು ಮುಂದಾಗಿದ್ದ ಬಾಲಕನನ್ನು ರೈಲ್ವೆ ಪೊಲೀಸರು ಸೆರೆಹಿಡಿದು ಹೆತ್ತವರ ವಶಕ್ಕೊಪ್ಪಿಸಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ 12ರ ಹರೆಯದ ಬಾಲಕನೊಬ್ಬ ರೈಲಿನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಈ ಸಂದರ್ಭ ರೈಲ್ವೆ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಬಾಲಕ ಮತ್ತೆ ಹೆತ್ತವರ ಮಡಿಲು ಸೇರಿದ್ದಾನೆ.
ಬುಧವಾರ ಶಾಲೆಗೆಂದು ಹೊರಟಿದ್ದ ಬಾಲಕ, ಶಾಲೆಗೂ ತಲುಪದೆ, ಮನೆಗೂ ವಾಪಸಾಗದ ಹಿನ್ನೆಲೆಯಲ್ಲಿ ಈತನಿಗಾಗಿ ಹುಡುಕಾಟ ನಡೆಸುವ ಮಧ್ಯೆ ಬಾಲಕ ಪೊಲೀಸರ ವಶದಲ್ಲಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಮಂಗಳೂರು-ತಿರುವನಂತಪುರ ಎಕ್ಸ್‍ಪ್ರೆಸ್ ರೈಲು ಪಯ್ಯನ್ನೂರು ತಲುಪಿದಾಗ ರೈಲಲ್ಲಿ ಏಕಾಂಗಿಯಾಗಿ ಕುಳಿತಿದ್ದ ಬಾಲಕನ ಬಗ್ಗೆ ಸಂಶಯದಿಂದ ವಿಚಾರಿಸಿದಾಗ ಮಾಹಿತಿ ಬಹಿರಂಗಗೊಂಡಿದೆ. ವಿಚಾರಣೆ ಸಂದರ್ಭ ಈತನ ವಶದಲ್ಲಿ ರೈಲಿನ ಟಿಕೆಟ್ ಅಥವಾ ಪ್ರಯಾಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲದಿರುವುದನ್ನು ಗಮನಿಸಿ ಕರ್ತವ್ಯದಲ್ಲಿದ್ದ ರೈಲ್ವೆ ಎಸ್.ಐ ಎಂ.ವಿ ಪ್ರಕಾಶನ್ ನೇತೃತ್ವದ ಪೊಲೀಸರ ತಂಡ ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಬಾಲಕ ಊರುಬಿಟ್ಟು ಪರಾರಿಯಾಗುತ್ತಿರುವ ಮಾಃಇತಿ ಲಭಿಸಿತ್ತು. ಬಾಲಕನನ್ನು ಕಣ್ಣೂರು ನಿಲ್ದಾಣಕ್ಕೆ ಕರೆದೊಯ್ದು, ಕುಂಬಳೆ ಪೊಲೀಸರ ನೆರವಿನಿಂದ ಹೆತ್ತವರನ್ನು ಕರೆಸಿ, ನಂತರ ಅವರ ಜತೆ ಕಳುಹಿಸಿಕೊಡಲಾಗಿದೆ.




