ಮಂಜೇಶ್ವರ: ವರ್ಕಾಡಿ ಕಜೆ ಪ್ರದೇಶದಲ್ಲಿ ಭೂಮಿ ಕುಸಿದು ಅಪಾಯದ ಸ್ಥಿತಿ ಉಂಟಾಗಿದ್ದು, ಸುತ್ತಮುತ್ತಲಿನ ನಿವಾಸಿಗಳನ್ನು ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಭೂಕುಸಿತದ ಪರಿಣಾಮವಾಗಿ ಸುಮಾರು 10 ಮೀಟರ್ ಆಳದ ಎರಡು ದೊಡ್ಡ ಗುಂಡಿಗಳು ಸೃಷ್ಟಿಯಾಗಿದೆ.
ಈ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಭೂಮಿ ಕುಸಿದಿದ್ದು, ಆ ಭಾಗದ ನೆಲ ಬಿರುಕು ಬಿಟ್ಟಿದೆ. ಈ ಕಾರಣದಿಂದಾಗಿ ಸ್ಥಳೀಯ ನಿವಾಸಿಗಳಾದ ಅವ್ವಮ್ಮ, ಅಸಿಯಮ್ಮ, ಅಹ್ಮದ್ ಕುಂಞÂ ಮೊದಲಾದವರನ್ನು ಊರವರ ಸಹಾಯದಿಂದ ಮೊದಲೇ ಸ್ಥಳಾಂತರಿಸಲಾಗಿದೆ. ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಸ್ಥಳೀಯರು ಈ ಅಪಾಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಿದ್ದು, ಅವರ ಪ್ರತಿಕ್ರಿಯೆಯಿಂದ ಸ್ಥಳಕ್ಕೆ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಭೂಕುಸಿತ ಸಂಭವಿಸುವ ಸಾಧ್ಯತೆಯನ್ನು ಮುಂಚಿತವಾಗಿ ನೋಡಿಕೊಂಡು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಸ್ಥಳೀಯ ಆಡಳಿತ ಈ ಪ್ರದೇಶವನ್ನು ಅಪಾಯಕರ ಪ್ರದೇಶವೆಂದು ಘೋಷಿಸಬೇಕಾಗಿದೆ. ನೈಸರ್ಗಿಕ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. 2021 ರಿಂದ ಇಲ್ಲಿ ಭೂಕುಸಿತ ಸಂಭವಿಸುತಿದ್ದು, ಭೂಮಿ ಕುಸಿತದ ನಿಖರ ಕಾರಣಗಳನ್ನು ತಿಳಿಯಲು ಭೂಗರ್ಭ ತಜ್ಞರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರದೇಶದ ಜನತೆಗೆ ತಾತ್ಕಾಲಿಕವಾಗಿ ಆ ಭಾಗದಿಂದ ದೂರವಿರಲು ಹಾಗೂ ಅಧಿಕಾರಿಗಳ ಸೂಚನೆಗಳನ್ನು ಪಾಲಿಸಲು ಸೂಚಿಸಲಾಗಿದೆ.






