ಜಮ್ಮು : ಏ.22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರ ದಾಳಿಯ ಹೊರತಾಗಿಯೂ ಈ ಸಲದ ಅಮರನಾಥ ಯಾತ್ರೆಗೆ ಹೊರಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಿದ್ಧರಾಗಿದ್ದಾರೆ. ದೇಶದಾದ್ಯಂತ ಬಂದಿದ್ದ ಭಕ್ತರು ಮೊದಲ ದಿನ ನೋಂದಣಿ ಕೇಂದ್ರದಲ್ಲಿ ಸರತಿಯಲ್ಲಿ ನಿಂತಿದ್ದರು.
'ಬಾಬಾ ಬರ್ಫಾನಿ ದರ್ಶನ ಪಡೆಯುವುದನ್ನು ಗುಂಡು ಹಾಗೂ ಬಾಂಬ್‌ಗಳಿಂದ ತಡೆಯಲು ಸಾಧ್ಯವಿಲ್ಲ' ಎಂದು ಮುಂಬೈನಿಂದ ಬಂದಿದ್ದ ದೇವಕರ್ ಕದಮ್ ತಿಳಿಸಿದರು. ಅವರು 11ನೇ ಸಲ ಅಮರನಾಥ ಯಾತ್ರೆ ಭಾಗಿಯಾಗಲು ಜಮ್ಮುವಿಗೆ ಬಂದಿದ್ದಾರೆ.
ಜಮ್ಮುವಿನ ರೈಲ್ವೆ ನಿಲ್ದಾಣದಲ್ಲಿ ಆರಂಭಿಸಿದ 'ಸರಸ್ವತಿ ಧಾಮ್' ನೋಂದಣಿ ಕೇಂದ್ರದಲ್ಲಿ ಮೊದಲ ದಿನ ದೊಡ್ಡ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಕಂಡುಬಂದರು. ಟೋಕನ್ ಪಡೆಯಲು ಸರತಿಯಲ್ಲಿ ನಿಂತಿದ್ದವರು 'ಬಂ ಬಂ ಬೋಲೆ', 'ಜೈ ಬಾಬಾ ಬರ್ಫಾನಿ' ಘೋಷಣೆ ಕೂಗಿದರು.
'ಪಹಲ್ಗಾಮ್ ಮಾರ್ಗದ ಮೂಲಕವೇ ಈ ಸಲ ಯಾತ್ರೆ ಕೈಗೊಳ್ಳುವ ಮೂಲಕ ಉಗ್ರರ ದಾಳಿಯಿಂದ ಮೃತಪಟ್ಟ ಪ್ರವಾಸಿಗರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ' ಎಂದು ಯಾತ್ರಾರ್ಥಿಗಳು ತಿಳಿಸಿದರು.
'ನಾವು ತುಂಬಾ ಉತ್ಸಾಹದಲ್ಲಿದ್ದೇವೆ. 26 ಜನರ ತಂಡವು ತುಂಬಾ ಸಂತೋಷದಲ್ಲಿದ್ದು, ಅಮರನಾಥನ ದರ್ಶನ ಪಡೆಯಲು ಮೊದಲ ತಂಡದ ಭಾಗವಾಗಿದ್ದೇವೆ. ನಮಗೆ ಯಾವುದೇ ಭಯವಿಲ್ಲ' ಎಂದು ಹೇಳಿದರು.

