HEALTH TIPS

ಭಾರತದ ಆಕಾಶ್ ಕ್ಷಿಪಣಿ ಖರೀದಿ ಮಾತುಕತೆಗೆ ಬ್ರೆಜಿಲ್ ವಿರಾಮ; ರಕ್ಷಣಾ ಸಂಬಂಧ ವಿಸ್ತರಣೆಗೆ ಸಮ್ಮತಿ

ಬ್ರೆಸಿಲಿಯಾ: ಭಾರತದ ರಕ್ಷಣಾ ರಫ್ತು ಮಹತ್ವಾಕಾಂಕ್ಷೆಗಳಿಗೆ ಹಿನ್ನಡೆಯಾಗುವ ಬೆಳವಣಿಗೆಯೊಂದರಲ್ಲಿ, ಸ್ವದೇಶಿ ನಿರ್ಮಿತ ಆಕಾಶ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲು ಭಾರತದೊಂದಿಗೆ ನಡೆಸುತ್ತಿದ್ದ ಮಾತುಕತೆಗಳನ್ನು ಬ್ರೆಜಿಲ್ ಸದ್ಯಕ್ಕೆ ಸ್ಥಗಿತಗೊಳಿಸಿದೆ.

ಆದಾಗ್ಯೂ, ಪ್ರಧಾನಂಮತ್ರಿ ನರೇಂದ್ರ ಮೋದಿ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು, ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮತ್ತು ರಕ್ಷಣಾ ಸಹಕಾರವನ್ನು ವಿಸ್ತರಿಸಲು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಒಪ್ಪಿಕೊಂಡಿದ್ದಾರೆ.

ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಮೋದಿ ಮತ್ತು ಬ್ರೆಜಿಲ್‌ ಅಧ್ಯಕ್ಷ ಲೂಲಾ ಡಾ ಸಿಲ್ವಾ ದ್ವಿಪಕ್ಷೀಯ ಸಭೆ ನಡೆಸಿದರು. ಬಾಹ್ಯಾಕಾಶ, ರಕ್ಷಣೆ, ವ್ಯಾಪಾರ, ಪರಿಸರ ಮತ್ತು ಹವಾಮಾನ ಬದಲಾವಣೆ ಸೇರಿದಂತೆ, ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವ ಅಗತ್ಯವನ್ನು ಉಭಯ ನಾಯಕರು ಒಪ್ಪಿಕೊಂಡರು.

ಹೊಸದಿಲ್ಲಿಯು ಬ್ರೆಸಿಲಿಯಾದೊಂದಿಗೆ ತನ್ನ ರಕ್ಷಣಾ ಕೈಗಾರಿಕಾ ಸಹಯೋಗವನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸುತ್ತಿದೆ. ಈ ವರ್ಷದ ಆರಂಭದಲ್ಲಿ, ಭಾರತದ ಆಕಾಶ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ರಫ್ತು ಪ್ರಸ್ತಾವನೆಯ ಕುರಿತು ಬ್ರೆಜಿಲ್ ಆಸಕ್ತಿ ತೋರಿಸಿತ್ತು. ಈ ಒಪ್ಪಂದದ ಮೌಲ್ಯವು 1 ಬಿಲಿಯನ್‌ (ಅಂದಾಜು 8,300 ಕೋಟಿ ರೂಪಾಯಿ) ಅಮೆರಿಕನ್‌ ಡಾಲರ್‌ಗೂ ಅಧಿಕ ಎಂದು ಅಂದಾಜಿಸಲಾಗಿತ್ತು.

ಆದರೆ ದಕ್ಷಿಣ ಅಮೆರಿಕದ ರಾಷ್ಟ್ರವಾದ ಬ್ರೆಜಿಲ್‌ ಸದ್ಯ ಆರ್ಥಿಕ ಮುಗ್ಗಟ್ಟು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಲ್ಲದೇ ತನ್ನ ಸಶಸ್ತ್ರ ಪಡೆಗಳ ಸ್ಥಳೀಯ ಆದ್ಯತೆಗಳನ್ನು ಪರಿಗಣಿಸಿ, ಆಕಾಶ್‌ ಕ್ಷಿಪಣಿ ಖರೀದಿ ಒಪ್ಪಂದದ ಮಾತುಕತೆಯನ್ನು ಬ್ರೆಜಿಲ್ ಸದ್ಯಕ್ಕೆ ತಡೆಹಿಡಿದಿದೆ. ವರದಿಗಳ ಪ್ರಕಾರ, ಬ್ರೆಜಿಲ್ ಮಾತುಕತೆಗಳನ್ನು ಕೇವಲ ಮುಂದೂಡಿದೆಯೇ ಹೊರತು ಸಂಪೂರ್ಣವಾಗಿ ರದ್ದುಗೊಳಿಸಿಲ್ಲ.

ಆಕಾಶ್ ಕ್ಷಿಪಣಿ ಒಪ್ಪಂದದ ಮಾತುಕತೆಗಳು ಸ್ಥಗಿತಗೊಂಡಿದ್ದರೂ, ಭಾರತ-ಬ್ರೆಜಿಲ್ ರಕ್ಷಣಾ ಸಂಬಂಧಗಳ ಸಕಾರಾತ್ಮಕ ಪಥಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದು ಭಾರತ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, "ಭಾರತ-ಬ್ರೆಜಿಲ್‌ ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದ್ದಾರೆ" ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, " ಭಾರತ ಮತ್ತು ಬ್ರೆಜಿಲ್ ನಾಯಕರ ನಡುವಿನ ಆತ್ಮೀಯತೆ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಸಹಕಾರಿ" ಎಂದು ಹೇಳಿದ್ದಾರೆ.

ಸದ್ಯ ಭಾರತದಿಂದ ಆಕಾಶ್‌ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವ ಮಾತುಕತೆಯನ್ನು ಬ್ರೆಜಿಲ್ ತಾತ್ಕಾಲಿಕವಾಗಿ ತಡೆಹಿಡಿದಿದೆ.‌ ಇದಕ್ಕೆ ಬಹುತೇಕವಾಗಿ ಬ್ರೆಜಿಲ್‌ನ ದುರ್ಬಲ ಆರ್ಥಿಕ ಪರಿಸ್ಥಿತಿ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಭಾರತದೊಂದಿಗಿ ತನ್ನ ರಕ್ಷಣಾ ಸಂಬಂಧವನ್ನು ಮುಂದುವರೆಸಲು ಬ್ರೆಜಿಲ್‌ ಬದ್ಧವಾಗಿದ್ದು, ಅನ್ಯ ಕ್ಷೇತ್ರಗಳಲ್ಲೂ ಸಹಕಾರ ವೃದ್ಧಿಗೆ ಪೂರಕವಾಗಿ ಕೆಲಸ ಮಾಡುವ ವಾಗ್ದಾನ ಮಾಡಿದೆ.

ಭಾರತದ ಸ್ವದೇಶಿ ನಿರ್ಮಿತ ಆಕಾಶ್‌ ಕ್ಷಿಪಣಿ ವ್ಯವಸ್ಥೆ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries