ಕಾಸರಗೋಡು: ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಮತ್ತು ಗ್ರಾಮ ಪಂಚಾಯಿತಿಗಳಿಂದ ಲಭ್ಯವಾಗುವ ದಾಖಲೆಗಳನ್ನು ಸೂಕ್ತರೀತಿಯಲ್ಲಿ ಬಳಸಿಕೊಂಡು ಸವಲತ್ತುಗಳನ್ನು ಪಡೆದುಕೊಲ್ಳುವ ಮೂಲಕ ಜನತೆ ಸ್ವಾವಲಂಬಿಗಳಾಗಬೇಕು ಎಂಬುದಾಗಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಹೇಳಿದರು.
ಅವರು ಬೇಡಡ್ಕ ಗ್ರಾಮ ಪಂಚಾಯಿತಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಜಾರಿಗೆ ತಂದಿರುವ ಎಬಿಸಿಡಿ ಶಿಬಿರದ ಮೂಲಕ ಪರಿಶಿಷ್ಟ ಪಂಗಡದವರಿಗೆ ಮೂಲಭೂತ ಅಧಿಕೃತ ದಾಖಲೆಗಳ ತಯಾರಿಸಿ, ಅವುಗಳ ಡಿಜಿಟಲೀಕರಣದ ಘೋಷಣೆ ಹಾಗೂ ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್‍ಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎಬಿಸಿಡಿ ಯೋಜನೆಯನ್ವಯ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಪಂಚಾಯಿತಿಯಲ್ಲಿರುವ 704 ಫಲಾನುಭವಿಗಳಿಗೆ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಜನನ ಪ್ರಮಾಣಪತ್ರ, ಪಡಿತರ ಚೀಟಿ, ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರಗಳಲ್ಲಿ ಅಧಿಕೃತ ದಾಖಲೆಗಳನ್ನು ಹಸ್ತಾಂತರಿಸಲಾಯಿತು. ಪಂಚಾಯಿತ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಬೇಡಡ್ಕ ಗ್ರಾಪಂ ಅಧ್ಯಕ್ಷೆ ಎಂ.ಧನ್ಯ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಯೋಜನಾ ಸಂಯೋಜಕ ಕೆ.ಆರ್. ಸಂತೋಷ್ ವರದಿ ಮಂಡಿಸಿದರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಮಾಧವನ್, ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಟಿ.ವರದರಾಜ್, ಪಿ.ವಸಂತ ಕುಮಾರಿ, ಲತಾಗೋಪಿ, ಬ್ಲಾಕ್ ಪಂಚಾಯಿತಿ ಸದಸ್ಯೆ ಸಾವಿತ್ರಿ ಬಾಲನ್, ಪಂಚಾಯಿತಿ ಸದಸ್ಯೆ ಪಿ.ಶ್ರುತಿ, ಸಿ.ಡಿ.ಎಸ್.ಅಧ್ಯಕ್ಷೆ ಗುಲಾಬಿ, ಎಸ್.ಎಸ್.ಅನೀಶ್, ಕೆ.ವೀರೇಂದ್ರಕುಮಾರ್, ಜನಾರ್ದನನ್ ಉಪಸ್ಥಿತರಿದ್ದರು. ಪ.ವರ್ಗ ಅಭಿವೃದ್ಧಿ ಇಲಾಖೆ ಅಧಿಕಾರಿ ಕೆ.ಮೋಹನದಾಸ್ ಸ್ವಾಗತಿಸಿದರು. ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಎಂ.ಕೆ. ಪ್ರದೀಶ್ ವಂದಿಸಿದರು.





