ಕಾಸರಗೋಡು: ಸಾರ್ವತ್ರಿಕ ಚುನಾವಣೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳ ಮೊದಲ ಹಂತದ ತಪಾಸಣಾ ಕಾರ್ಯ ಜಿಲ್ಲಾಧಿಕಾರಿ ಕಚೇರಿ ವಠಾರದ ಜಿಲ್ಲಾ ದಾಸ್ತಾನುಕೊಠಡಿಯಲ್ಲಿ ಸಿದ್ಧಪಡಿಸಲಾದ ವಿಶೇಷ ಸಭಾಂಗಣದಲ್ಲಿ ಆರಂಭಗೊಂಡಿತು.
ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಕೊಠಡಿ ಬಾಗಿಲು ತೆರೆದು ಮೊದಲ ಹಂತದ ಪರಿಶೀಲನೆಗಾಗಿ ಮತ ಯಂತ್ರಗಳನ್ನು ಹಸ್ತಾಂತರಿಸಿದರು. ಒಟ್ಟು 20 ತಂಡಗಳ ಬ್ಯಾಚ್ ತಪಾಸಣೆ ನಡೆಸುತ್ತಿದೆ. ಒಂದು ಹಂತದಲ್ಲಿ 20 ನಿಯಂತ್ರಣ ಘಟಕಗಳು ಮತ್ತು 60 ಬ್ಯಾಲೆಟ್ ಘಟಕಗಳನ್ನು ಪರಿಶೀಲಿಸಿ, ಸಂಗ್ರಹಿಸಲಾಗುತ್ತದೆ. ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿಯೂ ಆಗಿರುವ ಎಡಿಎಂ ಪಿ. ಅಖಿಲ್ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ. ಕುಂಞಂಬು ನಂಬಿಯಾರ್, ಟಿ.ಎಂ.ಎ. ಕರೀಂ, ಎಂ. ಶ್ರೀಧರ, ಉಮ್ಮರ್ ಪಾಟಲಡ್ಕ ಮೊದಲಾದವರು ತಪಾಸಣಾ ಕಾರ್ಯದಲ್ಲಿ ಭಾಗವಹಿಸಿದ್ದರು. ಆಗಸ್ಟ್‍ನಲ್ಲಿ ಮತ ಯಂತ್ರಗಳ ಮೊದಲ ಹಂತದ ಪರಿಶೀಲನೆ ನಡೆಯಲಿದೆ. ಒಟ್ಟು 5970 ಬ್ಯಾಲೆಟ್ ಯೂನಿಟ್‍ಗಳು ಮತ್ತು 2110 ಕಂಟ್ರೋಲ್ ಯೂನಿಟ್‍ಗಳನ್ನು ಪರಿಶೀಲಿಸಲಾಗುವುದು. ದಿನಕ್ಕೆ ಏಳು ಸುತ್ತುಗಳಲ್ಲಿ 140 ಕಂಟ್ರೋಲ್ ಯೂನಿಟ್‍ಗಳು ಮತ್ತು 420 ಬ್ಯಾಲೆಟ್ ಯೂನಿಟ್‍ಗಳನ್ನು ಪರಿಶೀಲಿಸಲಾಗುವುದು. ಚುನಾವಣಾ ಇಲಾಖೆ ಅಧಿಕಾರಿಗಳು, ಮತದಾನ ಯಂತ್ರ ತಯಾರಿಕಾ ಕಂಪನಿಯಾದ ಇಸಿಐಎಲ್‍ನ ಇಬ್ಬರು ಎಂಜಿನಿಯರ್‍ಗಳು ಪರಿಶೀಲನೆಯ ನೇತೃತ್ವ ವಹಿಸಿದ್ದಾರೆ. ಪರಿಶೀಲನೆ ಆಗಸ್ಟ್ 20 ರವರೆಗೆ ಮುಂದುವರಿಯಲಿದೆ.





