ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕಣ್ವತೀರ್ಥದಲ್ಲಿ ಉತ್ತರಪ್ರದೇಶ ನಿವಾಸಿ ಯೋಗೀಶ್ ಎಂಬವರು ವಾಸಿಸುತ್ತಿರುವ ಬಾಡಿಗೆ ಕೊಠಡಿಗೆ ಹಾಡಹಗಲು ನುಗ್ಗಿ ಎರಡುವರೆ ಪವನು ಚಿನ್ನಾಭರಣ ಕಳವುಗೈದಿರುವ ಪ್ರಕರಣದ ಆರೋಪಿ, ಉತ್ತರಪ್ರದೇಶ ನಿವಾಸಿ ಹಾಗೂ ಕುಂಜತ್ತೂರಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಗಣಪತ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಳಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಳವುಗೈದ ಚಿನ್ನಾಭರಣ ಈತನಿಂದ ಪೊಲೀಸರು ವಶಪಡಿಸಿಕೊಂಡಿದ್ದರು.
ಯೋಗೀಶ್ ಕುಟುಂಬ ಕಳೆದ ಹಲವು ವರ್ಷಗಳಿಂದ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಬುಧವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಮಧ್ಯಾಹ್ನ ವಾಪಸಾಗುವಾಗ ಬೆಡ್‍ರೂಮ್‍ನ ಕಪಾಟಿನಲ್ಲಿರಿಸಿದ್ದ ಎರಡುವರೆ ಪವನಿನ ಚಿನ್ನಾಭರಣ ನಾಪತ್ತೆಯಾಗಿತ್ತು. ಗೋಡೆಗೆ ಅಳವಡಿಸಿದ್ದ ಮರದ ಕಿಟಿಕಿ ತೆರವುಗೊಳಿಸಿ ಈ ಕಳವು ನಡೆಸಲಾಗಿತ್ತು. ಈ ಬಗ್ಗೆ ಯೋಗೀಶ್ ಪತ್ನಿ ಸೋನಲ್‍ನಿಶಾದ್ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.




