ಮಂಜೇಶ್ವರ: ಭಾವನೆಗಳಿಗೆ ಅನುಗುಣವಾಗಿ ಭಾಷೆಯನ್ನು ಹೊಸತುಗೊಳಿಸಬೇಕು. ಕಾಲದ ಓಘಕ್ಕೆ ಅನುಗುಣವಾಗಿ ಬರವಣಿಗೆಗಳು ಬದಲಾಗಬೇಕು. ಕವನಗಳು ಓದುವಾಗ ಪ್ರಶ್ನೆಗಳು ಮೂಡಬೇಕು. ಕಾವ್ಯದ ಮಾತು ಧ್ವನಿಯಾಗಬೇಕು ಎಂದು ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಚಿಂತಕ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ರಂಗಮಂಡಲ ಹಾಗೂ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸ್ಮಾರಕ ಗಿಳಿವಿಂಡು ಆಶ್ರಯದಲ್ಲಿ ಭಾನುವಾರ ಗಿಳಿವಿಂಡು ಆವರಣದಲ್ಲಿ ನಡೆದ ಕಾವ್ಯ ಸಂಸ್ಕøತಿ ಯಾನ 11 ನೇ ಕವಿಗೋಷ್ಠಿ ಸಮಾರಂಭದ ಉದ್ಘಾಟನೆ ಸಮಾರಂಭದಲ್ಲಿ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮದೇ ಆದ ಭಾಷೆಯನ್ನು ಅನುಸರಿಸಿದಾಗ ಆಶಯಗಳು ಪ್ರತಿಧ್ವನಿಸಲು ಸಾಧ್ಯವಾಗುತ್ತದೆ ಎಂದವರು ತಿಳಿಸಿದರು.
ಪ್ರಾಧ್ಯಾಪಕಿ ಹಾಗೂ ಕವಯಿತ್ರಿ ಡಾ.ಕೆ.ವಿ.ಸಿಂಧು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ,ಭಾಷೆ ಕೇವಲ ಆಶಯ ವಿನಿಮಯದ ಮಾಧ್ಯಮ ಮಾತ್ರವಲ್ಲ.ನಮ್ಮ ವಿಕಾರಗಳನ್ನು ಪ್ರತಿಫಲಿಸುವ ಕನ್ನಡಿಯೂ ಆಗಿದೆ. ಸಂಸ್ಕಾರ, ಜೀವನ ಚರ್ಯೆಯನ್ನು ಭಾಷೆ ಪ್ರತಿಫಲಿಸುತ್ತದೆ. ಬಹುಭಾಷಾ ನೆಲವಾದ ಕಾಸರಗೋಡು ಸರ್ವವನ್ನೂ ಒಳಗೊಳಿಸುವ ಮೂಲಕ ವಿಶಿಷ್ಟವಾಗಿದೆ. ಇದರಿಂದ ಭಾಷೆ-ಭಾಷೆಗಳಲ್ಲಿ ಅನುವಾದ, ಸಂವಹನಗಳಿಗೆ ಇಲ್ಲಿ ಹೆಚ್ಚು ಅವಕಾಸವಿರುವುದು ಭಾಷೆ-ಸಂಸ್ಕøತಿಯ ಸಂವರ್ಧನೆಗೆ ಪ್ರೇರಕವಾದುದು ಎಂದು ಅವರು ತಿಳಿಸಿದರು. ಕನ್ನಡದ ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಕೆ.ವಿ.ತಿರುಮಲೇಶ್ ಮೊದಲಾದವರ ಕೃತಿಗಳು ಮಲೆಯಾಳಂಗೆ ಭಾಷಾಂತರಗೊಂಡು ಸಾಹಿತ್ಯದ ಮೂಲಕ ವಿಸ್ಕøತ ಭಾಷಾ ಬಾಂಧವ್ಯಕ್ಕೆ ಕಾರಣವಾಗಿದೆ. ಆತ್ಮ ವಿಮರ್ಶೆ, ಕಣ್ಣೀರು ಮೊದಲಾದವುಗಳು ಭಾಷೆಯಾಗಿ ಬರಹಗಳ ಮೂಲಕ ಪರಸ್ಪರ ಸಂಚರಿಸುತ್ತದೆ. ಕಾವ್ಯಭಾಷೆಯ ಮೂಲಕ ಪರಸ್ಪರದ ಸಂವಹನ ಇಂತಹ ಸಾಹಿತ್ಯ-ಕಾವ್ಯಗೋಷ್ಠಿಗಳ ಮೂಲಕ ಹಂಚಲ್ಪಡಬೇಕು ಎಂದವರು ತಿಳಿಸಿದರು.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ, ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಉದ್ಯಮಿ ಗೋಪಾಲ ಶೆಟ್ಟಿ ಅರಿಬೈಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಈ ಸಂದರ್ಭ ಡಾ.ಪುರುಷೋತ್ತಮ ಬಿಳಿಮನೆ ಹಾಗೂ ಡಾ.ಕೆ.ವಿ. ಸಿಂಧು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾವಿದೆ, ಚಿತ್ರನಿರ್ದೇಶಕಿ ನಿರ್ಮಲಾ ನಾದನ್ ಸರ್ವಾಧ್ಯಕ್ಷರ ಪರಿಚಯ ನೀಡಿ ಮಾತನಾಡಿದರು.
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ, ರಂಗಮಂಡಲ ನಿರ್ದೇಶಕ ಡಿ.ಬಿ.ಮಲ್ಲಿಕಾರ್ಜುನ ಮಹಾಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಿಳಿವಿಂಡು ಕಾರ್ಯದರ್ಶಿ ಎಂ.ಉಮೇಶ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕವಿ, ಪತ್ರಕರ್ತ ್ರರಾಧಾಕೃಷ್ಣ ಕೆ.ಉಳಿಯತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಪುರುಷೋತ್ತಮ ಭಟ್.ಕೆ. ವಂದಿಸಿದರು.
ಬಳಿಕ ರಾಧಾಕೃಷ್ಣ ಕೆ,ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಅವಧಿಯ ಬಹುಭಾಷಾ ಕವಿಗೋಷ್ಠಿಯಲ್ಲಿ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಆಶಯ ನುಡಿಗಳನ್ನಾಡಿದರು. ಪುರುಷೋತ್ತಮ ಭಟ್ ಕೆ. ನಿರ್ವಹಿಸಿದರು. ಬಳಿಕ ಕನ್ನಡ ಮತ್ತು ಮಲೆಯಾಳದ ನಡುವಿನ ಸೇತುವೆ ಯಾವುದು ವಿಷಯದಲ್ಲಿ ಸಂವಾದ ನಡೆಯಿತು. ಡಾ.ಪುರುಷೋತ್ತಮ ಬಿಳಿಮಲೆ, ಡಾ.ಕೆ.ರಮಾನಂದ ಬನಾರಿ ಹಾಗೂ ಕೆ.ವಿ.ಕುಮಾರನ್ ಸಂವಾದದಲ್ಲಿ ಪಾಲ್ಗೊಂಡರು. ಜಿ.ಎನ್.ಮೋಹನ್ ಸಮನ್ವಯಕಾರರಾಗಿದ್ದರು.
ಅಪರಾಹ್ನ ನಡೆದ ಎರಡನೇ ಅವಧಿಯ ಬಹುಭಾಷಾ ಕವಿಗೋಷ್ಠಿಯಲ್ಲಿ ಡಾ.ಮೀನಾಕ್ಷಿ ರಾಮಚಂದ್ರ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ವಿಶಾಲಾಕ್ಷ ಪುತ್ರಕಳ ಆಶಯ ನುಡಿಗಳನ್ನಾಡಿದರು. ವನಿತಾ ಆರ್.ಶೆಟ್ಟಿ ನಿರ್ವಹಿಸಿದರು. ದಿವಾಕರ ಪಿ.ಅಶೋಕ ನಗರ ತಂಡದವರಿಂದ ಭಾವ-ಜಾನಪದ-ಗೀತ ಗಾಯನ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಸಮಾರೋಪ ನುಡಿಗಳನ್ನಾಡಿದರು. ಸರ್ವಾಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಗೌರವ ಉಪಸ್ಥಿತರಿದ್ದರು. ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಜೀನ್ ಲವೀನ ಮೊಂತೇರೊ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಶಿವಶಂಕರ್ ಮುಖ್ಯ ಅತಿಥಿಗಳಾಗಿದ್ದರು. ಗೋವಿಂದ ಪೈ ಸ್ಮಾರಕ ಸಮಿತಿ ಸದಸ್ಯ ವಾಸುದೇವ, ಯಕ್ಷಗಾನ ಕಲಾವಿದ ನರಸಿಂಹ ಬಲ್ಲಾಳ್, ಡಾ.ಎಚ್.ಆರ್.ಸ್ವಾಮಿ, ಡಾ.ಪದ್ಮಾ ಶೈಲೇಂದ್ರ ಬಂದಗದ್ದೆ, ಡಿ.ಬಿ.ಮಲ್ಲಿಕಾರ್ಜುನ ಮಹಾಮನೆ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಉಮೇಶ ಎಂ.ಸಾಲಿಯಾನ್ ಉಪಸ್ಥಿತರಿದ್ದರು. ಕಮಲಾಕ್ಷ ಡಿ.ಸ್ವಾಗತಿಸಿ, ಕಮಲಾಕ್ಷ ಕನಿಲ ವಂದಿಸಿದರು. ಸಂತೋಷ್ ಕುಮಾರ್ ಕೆ. ನಿರೂಪಿಸಿದರು.
ಬೆಳಿಗ್ಗೆ ಉದ್ಘಾಟನಾ ಸಮಾರಂಭಕ್ಕೂ ಮೊದಲು ಗಿಳಿವಿಂಡು ಪರಿಸರದಿಂದ ಹೊರಟ ದೀವಟಿಗೆ ಮೆರವಣಿಗೆಗೆ ಸರ್ವಾಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಚಾಲನೆ ನೀಡಿದರು.





.jpg)
.jpg)
