HEALTH TIPS

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನಿತ್ಯ ಕಂಟಕದ ಹೊರೆಯಾದ ಮಲೆಯಾಳಂ ಕಲಿಕೆಯೆಂಬ ಪ್ರಹಸನ

ಕುಂಬಳೆ: ಗಡಿನಾಡು ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕೇರಳ ಸರ್ಕಾರ ಆಡಳಿತ ಭಾಷೆಯ ಹೆಸರಲ್ಲಿ ನೀಡುತ್ತಿರುವ ಕಿರುಕುಳ ದಿನೇದಿನೇ ಹೆಚ್ಚಳಗೊಳ್ಳುತ್ತಿದ್ದು, ನ್ಯಾಯಾಲಯ, ರಾಷ್ಟ್ರಪತಿಗಳ ಆದೇಶಗಳ ಹೊರತಾಗಿಯೂ ಅಪ್ರಮಾಣಿಕ ನಡೆಗಳು ಕನ್ನಡಿಗರನ್ನು ರೊಚ್ಚಿಗೇಳುವಂತೆ ಮಾಡಿದೆ.

ಕೇರಳ ಶಿಕ್ಷಣ ಇಲಾಖೆ ಕಳೆದ ಶೈಕ್ಷಣಿಕ ವರ್ಷದಿಂದ(2024-25)ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕಡ್ಡಾಯವೆಂದು ಹೇಳದಿದ್ದರೂ ಐಚ್ಛಿಕ ಎಂಬ ಹೆಸರಿನಿಂದ ಕಿರಿಯ ಪ್ರಾಥಮಿಕ ಶಾಲೆಯ ಕನ್ನಡ ವಿದ್ಯಾರ್ಥಿಗಳಿಗೆ(ಒಂದನೇ ತರಗತಿಯಿಂದ 4ನೇ ತರಗತಿ) ಮಲೆಯಾಳಂ ಕಲಿಸಲು ಪ್ರಾರಂಭಿಸಿತು. ಆಸಕ್ತ ವಿದ್ಯಾರ್ಥಿಗಳಿಗೆ ಮಾತ್ರವೆಂದು ಹೇಳಿಕೊಂಡ ಸರ್ಕಾರ ಕಳೆದ ವರ್ಷ 5 ಶಾಲೆಗಳಿಗೆ ಒಬ್ಬರು ಶಿಕ್ಷಕಿಯರಂತೆ ಕನ್ನಡದ ಗಂಧಗಾಳಿಯೂ ಗೊತ್ತಿರದ ಹಲವಾರು ದಿನವೇತನ ಶಿಕ್ಷಕಿಯರನ್ನು ಇದಕ್ಕಾಗಿ ನೇಮಿಸಿತು. 

ಈ ವರ್ಷವೂ ಈ ಕ್ರಮ ಮುಂದುವರಿದಿದ್ದು, ಈ ಹೆಚ್ಚುವರಿ ಮಲೆಯಾಳ ಕಲಿಕೆಗೆ ಶಾಲಾ ಪೀರಿಯಡ್(ಅವಧಿ) ನಿಗದಿಪಡಿಸಿಲ್ಲ. ಪ್ರತಿನಿತ್ಯ ಒಂದೊಂದು ತರಗತಿಗಳಿಗೆ 8 ಅವಧಿಗಳಿದ್ದು, ಈ ಅವಧಿಗಳಲ್ಲಿ ಇತರ ಪಠ್ಯ ಕ್ರಮ ಬೋಧನೆಗೆ ಮಾತ್ರ ಸಮಯ ಲಭಿಸುತ್ತಿರುವ ಮಧ್ಯೆ ಹೆಚ್ಚುವರಿ ಬೋಧನೆಗೆ ಎಲ್ಲಿಂದ ಸಮಯ ನೀಡಬೇಕೆನ್ನುವ ಬಗ್ಗೆ ಶಿಕ್ಷಣ ಇಲಾಖೆಯಲ್ಲಿ ಉತ್ತರಗಳಿಲ್ಲ. ಜೊತೆಗೆ ಆಸಕ್ತ ವಿದ್ಯಾರ್ಥಿಗಳಿಗೆ ಮಾತ್ರ ಬೋಧನೆ ಎಂದಿರುವಾಗ ಆಸಕ್ತರಾಗದ ಮಕ್ಕಳು ಆ ಅವಧಿಯಲ್ಲಿ ಏನು ಮಾಡಬೇಕೆಂಬ ಬಗ್ಗೆಯೂ ಅಧಿಕೃತರು ಉತ್ತರಿಸುತ್ತಿಲ್ಲ.

ವಿಶೇಷವೆಂದರೆ, ಹಾಗೂ ಹೀಗೂ ಮಲೆಯಾಳಂ ಕಲಿತ ವಿದ್ಯಾರ್ಥಿಗಳಿಗೆ ಹಾಜರಾತಿ, ಪರೀಕ್ಷೆಗಳೂ ಇಲ್ಲ. ಪೂರ್ಣಾವಧಿ ಶಿಕ್ಷಕರೂ ಇಲ್ಲ. ಹಾಗಿದ್ದರೆ ವ್ಯರ್ಥ ಕಸರತ್ತುಗಳ ಮೂಲಕ ಒತ್ತಡದಲ್ಲಿ ಮಲೆಯಾಳಂ ಕಲಿಸುವ ಅಗತ್ಯವೇನೆಂಬುದು ಪೋಷಕರಿಗಾಗಲಿ, ಮಕ್ಕಳಿಗಾಗಲಿ ಅರ್ಥವಾಗದ ಪ್ರಶ್ನೆಯಾಗಿಯೇ ಉಳಿದಿದೆ. 

ವಾರಕ್ಕೆ 4 ಅವಧಿ ಎಲ್ಲಿದೆ?: 

ಐಚ್ಚಿಕವಾಗಿ ಮಲೆಯಾಳಂ ಕಲಿಯಲು ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ವಾರದಲ್ಲಿ 4 ಅವಧಿ ಎಂದರೆ ಒಟ್ಟು ಐದು ದಿನಗಳಲ್ಲಿ ಮೂರು ದಿನ ಒಂದೊಂದು ಗಂಟೆಗಳನ್ನು ಮಲೆಯಾಳ ಕಲಿಕೆಗೆ ಒದಗಿಸಬೇಕೆಂಬುದು ನಿಯಮ. ವಾರದಲ್ಲಿ ಮೂರರಂತೆ ತಿಂಗಳೊಂದಕ್ಕೆ 12 ಅವಧಿಗಳು ಮಕ್ಕಳಿಗೆ ನಷ್ಟವಾಗುತ್ತದೆ. ವರ್ಷಾಂತ್ಯದ ವೇಳೆಗೆ ಒಟ್ಟು ನಷ್ಟವಾಗುವ ಅವಧಿಗಳನ್ನು ಲೆಕ್ಕಹಾಕಿದರೆ ಇದು ಮಕ್ಕಳ ಕಲಿಕಾ ಹಕ್ಕುಗಳ ಉಲ್ಲಂಘನೆ ಎನ್ನದೆ ವಿಧಿಯಿಲ್ಲ. ಅದೂ ಶಿಕ್ಷಣ ಇಲಾಖೆಯಿಂದಲೇ ಇಂತಹದೊಂದು ಉಲ್ಲಂಘನೆ ಕನ್ನಡ ವಿದ್ಯಾರ್ಥಿಗಳ ಮೇಲಾಗುತ್ತಿರುವುದರ ಭವಿಷ್ಯದ ಲೋಪಗಳಿಗೆ ಉತ್ತರಿಸುವವರು ಯಾರೆಂಬುದು ಚಕಿತಗೊಳಿಸುತ್ತದೆ. 

ಸಾಮಾನ್ಯ ಪಠ್ಯಕ್ರಮದ ನಿತ್ಯ ತರಗತಿಗಳ ಪಠ್ಯಬೋಧನೆ, ನೋಟ್ಸ್ ರಚನೆ, ಕಲಿಕೆಗಳಿಗೆ ವಿಧ್ಯಾರ್ಥಿಗಳಿಗೆ ಸಮಯದ ಕೊರತೆ ಕಾಡುತ್ತಿರುವಾಗ, ಪರೀಕ್ಷೆಗಳೇ ಇರದ, ಅನಗತ್ಯ ಭಾಷೆಯೊಂದರ ಕಲಿಕೆ ಯಾಕೆಂಬುದೂ ಅಚ್ಚರಿ ಮೂಡಿಸುತ್ತದೆ.

ರಾಷ್ಟ್ರಪತಿಗಳ ಆದೇಶಕ್ಕೂ ಸಡ್ಡು:

ಕೇರಳ ವಿಧಾನಸಭೆ ಅಂಗೀಕರಿಸಿದ್ದ ಮಲೆಯಾಳ ಭಾಷಾ ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿಗಳು ಇತ್ತೀಚೆಗೆ ನಿರಾಕರಿಸಿದ್ದರು. ಸರ್ಕಾರಿ ವ್ಯವಹಾರಗಳನ್ನು ಸಂಪೂರ್ಣವಾಗಿ ಮಲೆಯಾಳಂ ಮಾಡುವುದರಿಂದ ರಾಜ್ಯದ ಭಾಷಾ ಅಲ್ಪಸಂಖ್ಯಾತರಾದ ಕನ್ನಡ ಮತ್ತು ತಮಿಳು ಭಾಷಿಕರ ಹಕ್ಕುಗಳನ್ನು ನಿರಾಕರಿಸಿದಂತಾಗುತ್ತದೆ ಎಂದು ಕೇರಳ ಸರ್ಕಾರದ ಕ್ರಮದ ವಿರುದ್ದ ದೂರು ದಾಖಲಿಸಿದ್ದ ಬೆನ್ನಿಗೆ ರಾಷ್ಟ್ರಪತಿಗಳು ಅಂಕಿತ ಹಾಕುವುದರಿಂದ ದೂರು ಸರಿದಿದ್ದರು. 


ಗಡಿ ಗ್ರಾಮಗಳಿಗೆ ತೊಡಕು: 

ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ, ಪೈವಳಿಕೆ, ಎಣ್ಮಕಜೆ, ಕಾಸರಗೋಡು ತಾಲೂಕಿನ ದೇಲಂಪಾಡಿ, ಬೆಳ್ಳೂರು, ಬದಿಯಡ್ಕ, ಕುಂಬ್ಡಾಜೆ, ಬೆಳ್ಳೂರು, ಮಧೂರು ಮೊದಲಾದ ಕನ್ನಡ ಬಹುಸಂಖ್ಯೆಯ ಪಂಚಾಯತಿಗಳಲ್ಲಿ ಒತ್ತಡದಿಂದ ಕಲಿಸಲಾಗುವ ಮಲೆಯಾಳ ಭಾಷೆ ಅನಗತ್ಯವಾದುದು. ಶಾಲೆಯಿಂದ ಹೊರತಾಗಿ ಮನೆಯಲ್ಲಾಗಲಿ, ಇತರೆಡೆ ಅವರ ಕಲಿಕೆಯನ್ನು ಗಮನಿಸಲೂ ಮಲೆಯಾಳಂ ಬಾರದವರೇ ಹೆಚ್ಚಿರುವಾಗ ಸರ್ಕಾರದ ಈ ಉಪಕ್ರಮ ಖಂಡನಾರ್ಹ.

ಅಭಿಮತ:

- ಕನ್ನಡ ಶಾಲೆಗಳಲ್ಲಿ ಮಲೆಯಾಳ ಕಲಿಕೆಯ ಅವಕಾಶ ಒದಗಿಸಬೇಕೆಂಬ ನೆಲೆಯಲ್ಲಿ ವಾರಕ್ಕೆ ಒಂದು ದಿನ ಗೌರವ ಅಧ್ಯಾಪಕರನ್ನು ಇಲಾಖೆಯು ನೇಮಿಸುತ್ತಾ ಇತ್ತು. ಆದರೆ ಈಗ ವಾರಕ್ಕೆ ಎರಡು,ಮೂರು ದಿನ ಶಾಲೆಗಳಲ್ಲಿ ತರಗತಿಗಳನ್ನು ನಿರ್ವಹಿಸಲು ಆದೇಶ ಬಂದಿರುತ್ತದೆ. ಇತರ ಭಾಷಾ ಮಾಧ್ಯಮ ಕಲಿಯುವವರಂತೆಯೇ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಬೇಕು. ಆದರೆ ಹೆಚ್ಚುವರಿ ಈ ಪಿರೀಡುಗಳನ್ನು ಹೊಂದಿಸುವುದು ಹೇಗೆ ? ಮಕ್ಕಳ ಹಕ್ಕುಗಳ ಮೇಲಿನ ಸವಾರಿಯಲ್ಲವೇ.. ಕೇರಳ ಸರ್ಕಾರದ ಭಾಷಾ ನಿಯಮ 2017 ರಾಷ್ಟ್ರಪತಿಗಳ ಅಂಕಿತವಾಗದೆ ಇರುವುದರಿಂದ ಈ ಅದೇಶ ಖಂಡನೀಯ. 

-ಪ್ರದೀಪ್ ಕುಮಾರ್ ಶೆಟ್ಟಿ ಡಿ.ಬಿ

ಪ್ರಧಾನ ಕಾರ್ಯದರ್ಶಿ 

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆ (ರಿ) ಕಾಸರಗೋಡು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries