ಕಾಸರಗೋಡು: ನಗರದ ಜನರಲ್ ಆಸ್ಪತ್ರೆ ವಠಾರದಲ್ಲಿನ ಜಿಲ್ಲಾ ಕ್ಷಯರೋಗ(ಟಿ.ಬಿ) ಕೇಂದ್ರ ಶಿಥಿಲಾವಸ್ಥೆಯಿಲ್ಲಿದ್ದು, ಯಾವುದೇ ಸಂದರ್ಭ ಕುಸಿದು ಬೀಳುವ ಭೀತಿಯಲ್ಲಿದೆ. ರಾಜ್ಯದ ಆರೋಗ್ಯ ವಲಯ ಎಲ್ಲಾ ಕಡೆ ಡಿಜಿಟಲ್ ಆಗಿ ಮಾರ್ಪಾಡುಗೊಳ್ಳುತ್ತಿರುವ ಮಧ್ಯೆ, ಕಾಸರಗೋಡಿನ ಜಿಲ್ಲಾ ಕ್ಷಯರೋಗ ಕೇಂದ್ರದ ಈ ದುಸ್ಥಿತಿ ರಾಜ್ಯದ ಆರೋಗ್ಯ ಇಲಾಖೆಯನ್ನು ಅಣಕಿಸುವಂತಿದೆ.
ಕಾಸರಗೋಡು ಜನರಲ್ ಆಸ್ಪತ್ರೆ ವಠಾರದಲ್ಲೇ ಈ ಟಿ.ಬಿ ಕೇಂದ್ರ ಕಾರ್ಯಾಚರಿಸುತ್ತಿದೆ. ವಿಪರ್ಯಾಸವೆಂದರೆ, ಇಲಾಖೆ ಅಧಿಕಾರಿಗಳು ಕಟ್ಟಡವನ್ನು ಉಪಯೋಗ ಶೂನ್ಯವೆಂದು ಘೋಷಿಸಿರುವ ಅದೇ ಕಟ್ಟಡದಲ್ಲಿ ಇಂದಿಗೂ ಕೇಂದ್ರ ಕಾರ್ಯಾಚರಿಸುತ್ತಿರುವುದು ರೋಗಿಗಳ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯ ಧೋರಣೆ ಸಾಬೀತಾಗಿದೆ. ಒಂದೆಡೆ ಮೇಲ್ಚಾವಣಿಗೆ ಸೋರಿಕೆ ತಡೆಗಟ್ಟಲು ಅಳವಡಿಸಿದ ಪ್ಲಾಸ್ಟಿಕ್, ಇನ್ನೊಂದೆಡೆ ಶಿಥಿಲಗೊಂಡಿರುವ ಗೋಡೆ, ಶುಚಿತ್ವ ಪಾಲಿಸದ ವಠಾರ ಇವೆಲ್ಲವೂ ಕಾಸರಗೋಡು ಜನರಲ್ ಆಸ್ಪತ್ರೆಯ ಅವ್ಯವಸ್ಥೆಯನ್ನು ಜಗಜ್ಜಾಹೀರುಗೊಳಿಸಿದೆ. ಹೊರ ರೋಗಿ ವಿಭಾಗ ಹಾಗೂ ಮಾದರಿ ಸಂಗ್ರಹಣಾ ಕೊಠಡಿ ಇದೇ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.
ಇನ್ನು ಜನರಲ್ ಆಸ್ಪತ್ರೆಯಲ್ಲಿ 24 ಗಂಟೆಗಳ ಮರಣೋತ್ತರ ಪರೀಕ್ಷೆ ನಡೆಸುವ ಘೋಷಣೆ ಕಡತಕ್ಕೆ ಸೀಮಿತವಾಗುತ್ತಿದೆ. ಅಗತ್ಯ ಸಿಬ್ಬಂದಿ ಕೊರತೆಯಿಂದ ದಿನದ 24ತಾಸುಗಳ ಕಾಲ ನಡೆಯಬೇಕಾದ ಶವಮಹಜರು ಪ್ರಕ್ರಿಯೆಗೂ ತೊಡಕುಂಟಾಗುತ್ತಿದೆ. ಇಲ್ಲಿ ಮೂರು ವರ್ಷಗಳ ಹಿಂದೆ 24ತಾಸುಗಳ ಮರಣೋತ್ತರ ಪರೀಕ್ಷೆ ಆರಂಭಿಸಲಾಗಿದ್ದು, ಸಿಬ್ಬಂದಿ ಕೊರತೆ ನಿರಂತರ ಕಾಡುತ್ತಿದೆ. ದಿನದ 24 ಗಂಟೆ ಕಾಲ ಮರಣೋತ್ತರ ಪರೀಕ್ಷೆ ನಡೆಸುವ ರಾಜ್ಯದ ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದ್ದ ಕಾಸರಗೋಡು ಜನರಲ್ ಆಸ್ಪತ್ರೆ ಇಂದು ಸಮಸ್ಯೆಗಳ ಆಗರವಾಗುತ್ತಿದೆ. ಉಕ್ಕಿನಡ್ಕದ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಪೂರಕವಾಗಿ ಜನರಲ್ ಆಸ್ಪತ್ರೆಯನ್ನು ಎಂಬಿಬಿಎಸ್ ಕಲಿಕೆಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಾಗಿ ನಾಮಕರಣ ಮಾಡಲಾಗಿದ್ದರೂ, ಅಗತ್ಯ ಸೌಲಭ್ಯ ಒದಗಿಸಲು ಸರ್ಕಾರ ಇನ್ನೂ ತಯಾರಾಗಿಲ್ಲ. ತಜ್ಞ ವೈದ್ಯರ ಕೊರತೆ ಕಾಡುತ್ತಿದ್ದು, ಈಗಾಗಲೇ ಬೇರೆ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಂದ ವೈದ್ಯರನ್ನು ನೇಮಕಾತಿ ನಡೆಸುವ ಪ್ರಕ್ರಿಯೆ ನಡೆದುಬರುತ್ತಿದೆ.
ಅಭಿಮತ:
ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕರು, ನಗರಸಭೆ ಅಧ್ಯಕ್ಷರು, ಡಿಎಂಒ, ಐಎಂಎ ಪ್ರತಿನಿಧಿಗಳು ಮುಂತಾದವರೊಂದಿಗೆ ಜನರಲ್ ಆಸ್ಪತ್ರೆಯ ಕೆಲವೊಂದು ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಜನರಲ್ ಆಸ್ಪತ್ರೆ ಬಗ್ಗೆ ತೋರುವ ನಿರ್ಲಕ್ಷ್ಯ ಧೋರಣೆ ಕೈಬಿಡಬೇಕು. ಅಗತ್ಯ ವೈದ್ಯರನ್ನು ನೇಮಿಸಿದರೆ ಮಾತ್ರ ರಾತ್ರಿಯ ಮರಣೋತ್ತರ ಪರೀಕ್ಷೆಗೆ ಸಹಕರಿಸಲು ಸಾಧ್ಯವಾಗಲಿದೆ.
ಡಾ. ಶಮೀಮಾ ತನ್ವೀರ್, ಜಿಲ್ಲಾಧ್ಯಕ್ಷೆ
ಕೆಜಿಎಂಓಎ, ಕಾಸರಗೋಡು ಜಿಲ್ಲಾ ಘಟಕ




