ಬದಿಯಡ್ಕ: ಅಗಲಿದ ಖ್ಯಾತ ಬಣ್ಣದ ವೇಷಧಾರಿಗಳಾದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರರಿಗೆ ಶ್ರೀಎಡನೀರು ಮಠದಲ್ಲಿ ಭಾನುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವ್ರತಾರಣೆಯ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆ ದಶಾಹದ ಸಂದರ್ಭ ಮೌನಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಯಕ್ಷಕಲಾವಿದ ರವಿರಾಜ ಪನೆಯಾಲ ಅವರು ಮಾತನಾಡಿ, ಯಕ್ಷರಂಗದಲ್ಲಿ ಗಜಪಾದವನ್ನೂರಿ ತಮ್ಮದೇ ಶೈಲಿಯಿಂದ ಬಣ್ಣದ ವೇಷಕ್ಕೆ ಭಾಷ್ಯವನ್ನು ಬರೆದವರು ಶೆಟ್ಟಿಗಾರರು. ಪ್ರತಿಯೊಬ್ಬರ ಸ್ಮರಣೆಯಲ್ಲಿ ಸದಾಕಾಲ ಉಳಿಯುವ ಅರ್ಹತೆಯನ್ನು ತನ್ನ ಕಸುಬಿನ ಮೂಲಕ ಅವರು ಸಾಧಿಸಿ ತೋರಿಸಿದ್ದಾರೆ. ಬಣ್ಣದ ಮಾಲಿಂಗಜ್ಜನಿಗೆ ಕಸೆಕಟ್ಟುವ ಕೆಲಸಕ್ಕಾಗಿ ಕಟೀಲು ಮೇಳಕ್ಕೆ ಸೇರ್ಪಡೆಯಾಗಿ ನಂತರ ಅವರ ಮಾತಿನಂತೆ ಇವರು ವೇಷತೊಡಲು ಅಣಿಯಾದರು. ಖಚಿತವಾದ ಲಯಜ್ಞಾನ ಅವರಿಗೆ ಸಿದ್ಧಿಯಾಗಿತ್ತು. ಯಕ್ಷರಂಗವೇ ನಿಬ್ಬೆರಗಾಗಬಲ್ಲ ವೇಷಧಾರಿಯಾಗಿ ಬೆಳೆದು ನಿಂತ ಅವರ ಸಾಧನಾಪಥ ಯುವಕಲಾವಿದರಿಗೆ ಮಾದರಿಯಾಗಿದೆ. ಮಹಿಷಾಸುರ, ರುದ್ರಭೀಮ ಮೊದಲಾದ ಪಾತ್ರಗಳಿಗಾಗಿಯೇ ವಿಶೇಷವಾದ ಕಂಠಸಿರಿ ಅವರಿಗೆ ಸಿದ್ಧವಾಗಿತ್ತು. ಬಹುಕಾಲ ಎಡನೀರು ಮಠದ ಸಂಪರ್ಕದಲ್ಲಿದ್ದರು. ಎಲ್ಲರೂ ಮೆಚ್ಚುವ ಹಾಗೆ ಅರ್ಥ, ವಾದ ವಿವಾದ, ಹಾಸ್ಯಪ್ರಜ್ಞೆಯೊಂದಿಗೆ ಮಿಳಿತವಾದ ರಂಗದ ನಿರ್ವಹಣೆ ಜನರನ್ನು ಆಕರ್ಷಿಸುತ್ತಿತ್ತು. ಯಕ್ಷಗಾನವನ್ನು ಅದಮ್ಯವಾಗಿ ಪ್ರೀತಿಸಿ, ತನ್ನ ಬದುಕನ್ನು ಕಟ್ಟಿಕೊಂಡ ಸದಾಶಿವ ಶೆಟ್ಟಿಗಾರರು ಮಾಲಿಂಗಜ್ಜನ ನೇರ ಶಿಷ್ಯರಾಗಿದ್ದಾರೆ. ಅವರ ನೆನಪು ಕಲಾವಿದರಿಗೆಲ್ಲ ಸ್ಪೂರ್ತಿಯಾಗಲಿ ಎಂದರು.
ನಂತರ ಭೀಷ್ಮೋತ್ಪತ್ತಿ ಪ್ರಸಂಗದಲ್ಲಿ ಸತ್ಯನಾರಾಯಣ ಪುಣಿಚಿತ್ತಾಯ ಹಾಗೂ ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಹಾಗೂ ಲವಕುಮಾರ ಐಲ ಚೆಂಡೆಮದ್ದಳೆಯಲ್ಲಿ ಜೊತೆಗೂಡಿದರು. ರವಿರಾಜ ಪನೆಯಾಲ, ಡಾ. ಪ್ರದೀಪ ಸಾಮಗ, ಡಾ.ವೈಕುಂಠ ಹೇರಳೆ, ರಾಧಾಕೃಷ್ಣ ಕಲ್ಚಾರು ಮುಮ್ಮೇಳದಲ್ಲಿ ಸಹಕರಿಸಿದರು.





