ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಹೈಸ್ಕೂಲು ವಿಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ಕರಿಂಬಿಲ ಕೇಶವ ಪ್ರಭು ಅವರ ಗದ್ದೆಯಲ್ಲಿ ಭತ್ತದ ನಾಟಿ ಆಯೋಜಿಸಲಾಯಿತು. ಬುಧವಾರ ಬೆಳಗ್ಗೆ ವಿದ್ಯಾರ್ಥಿಗಳು ಪಾಲ್ಗೊಂಡು ಅತ್ಯುತ್ಸಾಹದಿಂದ ಕೆಸರುಗದ್ದೆಯಲ್ಲಿ ನೇಜಿನೆಟ್ಟು ಸಂಭ್ರಮಿಸಿದರು. ಹಿರಿಯ ಪಶುವೈದ್ಯ ಡಾ. ವೈ.ವಿ.ಕೃಷ್ಣಮೂರ್ತಿ ನೇಜಿಯನ್ನು ಮಕ್ಕಳಿಗೆ ನೀಡುವ ಮೂಲಕ ಚಾಲನೆ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ, ಶಾಲೆಯ ಪ್ರಯೋಗಾಲಯದಲ್ಲಿ ವಿಜ್ಞಾನದ ಬಗ್ಗೆ ಅರಿವು ಪಡೆದುಕೊಳ್ಳುವಂತೆ ಜೀವನದ ಅರಿವನ್ನು ಈ ಕೃಷಿಭೂಮಿಯಲ್ಲಿ ಸ್ವತಃ ಕಾಯಕವನ್ನು ತೊಡಗಿಸಿಕೊಳ್ಳುತ್ತಾ ಅನುಭವವು ವಿದ್ಯಾರ್ಥಿಗಳಿಗೆ ಲಭಿಸಬೇಕು. ದಿನಬೆಳಗಾದರೆ ರಾತ್ರಿಯ ತನಕ ಶಾಲೆ, ಪುಸ್ತಕ, ಅಂಕ ಗಳಿಕೆ, ಮೊಬೈಲ್, ಕಂಪ್ಯೂಟರ್ ಎಂಬಿತ್ಯಾದಿಗಳ ಜೊತೆಗೆ ನಡೆದಾಡುತ್ತಿರುವ ಕಾಲಘಟ್ಟದಲ್ಲಿ ಎಲ್ಲವನ್ನೂ ಮರೆತು ಹಸಿವೆಯನ್ನು ನೀಗಿಸುವ ಅಕ್ಕಿಯ ಉತ್ಪಾದನೆ ಭತ್ತದ ನಾಟಿಮಾಡುವ ಮೂಲಕ ಹೇಗೆ ಎಂಬ ಕುರಿತಾಗಿ ತಿಳುವಳಿಕೆಯು ಮಕ್ಕಳಿಗೆ ದೊರಕಬೇಕು. ಅದು ಅವರ ಜೀವನಕ್ಕೆ ಭದ್ರಬುನಾದಿಯನ್ನು ನೀಡುತ್ತದೆ ಎಂದರು.
ಶಾಲಾ ವಿದ್ಯಾರ್ಥಿಯ ಪೋಷಕರಾದ ಅನಿಲ್ ಪ್ರಭು ಕರಿಂಬಿಲ ಹಾಗೂ ಸುಮನ ದಂಪತಿಗಳು ಅವರ ಮನೆಯ ಗದ್ದೆಯನ್ನು ಉಳುಮೆ ಮಾಡಿ ನಾಟಿ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದ್ದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸುಧಾಕರ ರೈ, ರಾಜಗೋಪಾಲ ಚಾಲತ್ತಡ್ಕ, ಮಾತೃಸಮಿತಿಯ ಸದಸ್ಯರು, ಶಾಲಾ ಅಧ್ಯಾಪಕ ವೃಂದದ ಗಣೇಶ್ ಆಚಾರ್ಯ, ವಿನಯಪಾಲ್, ಮಮತಾ ಸಾವಿತ್ರಿ, ತೇಜಸ್ವಿನಿ, ವಿದ್ಯಾ ಅದ್ರುಗುಳಿ ಸಹಕರಿಸಿದ್ದರು. ರಾಮಚಂದ್ರ ಕರಿಂಬಿಲ ಮಕ್ಕಳ ಜೊತೆ ಉಳುಮೆ ಯಂತ್ರದ ಉಪಯೋಗ ಹಾಗೂ ಉಳುಮೆಯ ಕೌಶಲ್ಯದ ಬಗ್ಗೆ ಮಾಹಿತಿ ನೀಡಿದರು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಇದೇ ವಿದ್ಯಾರ್ಥಿಗಳಿಗೆ ಗದ್ದೆ ಬೇಸಾಯದ ಪ್ರಾಥಮಿಕ ಹಂತದ ಕಾರ್ಯಾಗಾರವನ್ನು ಕಾನತ್ತಿಲ ಮಹಾಲಿಂಗ ಭಟ್ಟರ ಕೃಷಿಭೂಮಿಯಲ್ಲಿ ಆಯೋಜಿಸಲಾಗಿತ್ತು.
ಅಭಿಮತ:
ಬಾಲ್ಯಕಾಲದಲ್ಲಿ ಎತ್ತುಗಳನ್ನು ಬಳಸಿ ಉಳುಮೆ ಮಾಡುತ್ತಿರುವುದನ್ನು ನೋಡಿದ ನೆನಪಿದೆ. ಮದುವೆಯಾಗಿ ಬಂದು ಇದೀಗ 15 ವರ್ಷಗಳ ಸುದೀರ್ಘ ಭತ್ತದ ಕೃಷಿ ತೃಪ್ತಿ ತಂದಿದೆ. ಯಾವುದೇ ರಾಸಾಯನಿಕ ಬಳಸದೆ ನಮಗೆ ಬೇಕಾದ ಭತ್ತವನ್ನು ಬೆಳೆಸುತ್ತಿದ್ದೇವೆ. ಭತ್ತದ ಕೃಷಿಯ ಕುಟುಂಬವು ಮನಸ್ಸಿಗೆ ಸಂತಸ, ನೆಮ್ಮದಿಯನ್ನು ನೀಡಿದೆ. ವಿದ್ಯಾರ್ಥಿಗಳು ಗದ್ದೆಬೇಸಾಯದ ಬಗ್ಗೆ ಪೂರ್ಣ ಮಾಹಿತಿಯನ್ನು ಕೇಳಿ ಪಡೆದುಕೊಂಡಿರುವುದು ಶ್ಲಾಘನೀಯ.
- ಸುಮನ ಪ್ರಭು ಕರಿಂಬಿಲ





