ಸಂವಿಧಾನದಲ್ಲಿರುವ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ಪರಿಶೀಲಿಸುವಂತೆ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಕರೆಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಖರ್ಗೆ ”ದತ್ತಾತ್ರೇಯ ಹೊಸಬಾಳೆ ಮನುಸ್ಮೃತಿಯ ವ್ಯಕ್ತಿ.
ಇದು ಹೊಸಬಾಳೆಯವರ ಮಾರ್ಗ ಮಾತ್ರವಲ್ಲ, ಆರ್‌ಎಸ್‌ಎಸ್‌ನ ಮಾರ್ಗವೂ ಆಗಿದೆ” ಎಂದರು.
“ಬಡ ವರ್ಗದ ಜನರು ಮೇಲೆ ಬರುವುದನ್ನು ಅವರು ಬಯಸುವುದಿಲ್ಲ. ಮತ್ತು ಸಾವಿರಾರು ವರ್ಷಗಳ ಹಿಂದೆ ಆಚರಣೆಯಲ್ಲಿದ್ದದ್ದು ಮುಂದುವರಿಯಬೇಕೆಂದು ಅವರು ಬಯಸುತ್ತಾರೆ. ಅದಕ್ಕಾಗಿಯೇ ಅವರು ಸಮಾಜವಾದ, ಜಾತ್ಯತೀತತೆ ಮತ್ತು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಇಷ್ಟಪಡುವುದಿಲ್ಲ” ಎಂದು ಖರ್ಗೆ ಹೇಳಿದರು.
“ಆರ್‌ಎಸ್‌ಎಸ್ ಯಾವಾಗಲೂ ಬಡವರು, ದೀನದಲಿತರು, ಪರಿಶಿಷ್ಟ ಜಾತಿ ಮತ್ತು ಇತರ ಸಮುದಾಯಗಳ ವಿರುದ್ಧವಾಗಿದೆ. ಅವರಿಗೆ ಅಷ್ಟೊಂದು ಆಸಕ್ತಿ ಇದ್ದಿದ್ದರೆ, ಹಿಂದೂ ಧರ್ಮದ ಪ್ರತಿಪಾದಕರು ಎಂದು ಹೇಳಿಕೊಳ್ಳುವ ಅವರು ಅಸ್ಪೃಶ್ಯತೆಯನ್ನು ತೊಡೆದುಹಾಕಬಹುದಿತ್ತಲ್ಲ ಎಂದು ಖರ್ಗೆ ಸವಾಲೆಸೆದರು.
ಆರ್‌ಎಸ್‌ಎಸ್ ತನ್ನ ಎಲ್ಲಾ ಕಾರ್ಯಕರ್ತರನ್ನು ಅಸ್ಪೃಶ್ಯತೆಯನ್ನು ತೊಡೆದುಹಾಕಲು ಮತ್ತು ದೇಶವನ್ನು ಒಗ್ಗಟ್ಟಿನಿಂದ ಇರಿಸಲು ನಿಯೋಜಿಸಬೇಕು. ಸುಮ್ಮನೆ ಮಾತನಾಡುವುದು, ಗಲಾಟೆ ಮಾಡುವುದು ಮತ್ತು ದೇಶದಲ್ಲಿ ಗೊಂದಲ ಸೃಷ್ಟಿಸುವುದು ತುಂಬಾ ಕೆಟ್ಟದ್ದು, ನಾವು ಅದನ್ನು ಬಲವಾಗಿ ವಿರೋಧಿಸುತ್ತೇವೆ” ಎಂದರು.




