ಕಾಸರಗೋಡು: ಚೆರುವತ್ತೂರು ಕುಲಂಗಾಟ್ ಬೆಟ್ಟಪ್ರದೇಶದಲ್ಲಿ ಬಿರುಕು ಉಂಟಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ವಿಪತ್ತು ನಿವಾರಣಾ ಪ್ರಾಧಿಕಾರದ ತುರ್ತು ಸಭೆ ನಡೆಸಿ ಅಗತ್ಯ ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ಪಿ. ಅಖಿಲ್ ಅಧ್ಯಕ್ಷತೆ ವಹಿಸಿದ್ದರು.
ಕಂದಾಯ, ಪೆÇಲೀಸ್, ಅಗ್ನಿಶಾಮಕ ದಳ, ಅರಣ್ಯ ಮತ್ತು ಸ್ಥಳೀಯಾಡಳಿತ ಇಲಾಖೆಗಳು ಜಾಗರೂಕರಾಗಿರುವಂತೆ ಸೂಚನೆ ನೀಡಲಾಗಿದ್ದು, ಅಪಾಯವಿರುವ ಪ್ರದೇಶಗಳಲ್ಲಿ ಜನರು ಗುಂಪು ಸೇರುವುದನ್ನು ಕಟ್ಟುನಿಟ್ಟಾಗಿ ತಡೆಹಿಡಿಯುವಂತೆ ಸೂಚಿಸಲಾಯಿತು. ಇದೇ ಸಂದರ್ಭ ತೀವ್ರ ಸಮುದ್ರ ಕೊರೆತ ಎದುರಿಸುತ್ತಿರುವ ಪ್ರದೇಶಗಳಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲು ಸಭೆ ತೀರ್ಮಾನಿಸಿತು. ಅಗತ್ಯವಿರುವಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರನ್ನು ಸ್ಥಳಾಂತರಿಸಲು ಹಾಗೂ ಅವರಿಗೆ ಪುನರ್ವಸತಿ ಒದಗಿಸಲು ಶಿಬಿರಗಳನ್ನು ಸ್ಥಾಪಿಸಲಾಗುವುದು. ತ್ರಿಕನ್ನಾಡು ಹಾಗೂ ಕೋಟಿಕುಳಂ ಕರಾವಳಿಯಲ್ಲಿ ಸಮುದ್ರ ಕೊರೆತ ತಡೆಗಟ್ಟಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಲಸಂಪನ್ಮೂಲ ಇಲಾಖೆಗೆ ಸೂಚನೆ ನೀಡಲಾಗಿದೆ.
ಅಪಾಯಕಾರಿ ಮರದ ಕೊಂಬೆಗಳನ್ನು ಕಡಿಯಲು ಕ್ರಮ ಕೈಗೊಳ್ಳಲಾಗಿದೆ. ನಗರಸಭೆ ಮತ್ತು ಪಂಚಾಯಿತಿ ಕಾರ್ಯದರ್ಶಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ ಬೇಬಿ ಬಾಲಕೃಷ್ಣನ್ ಮತ್ತು ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.




