ಕಾಸರಗೋಡು: ಸಂತಾನೋತ್ಪತ್ತಿಗಾಗಿ ಬರುವ ಮೀನುಗಳ ಸುಗಮ ಸಂಚಾರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜೂ.8ರ ಮಧ್ಯರಾತ್ರಿ ಕೇರಳಾದ್ಯಂತ ಆರಂಭಗೊಂಡಿದ್ದ ಮೀನುಗಾರಿಕಾ ನಿಷೇಧ ಜುಲೈ 31ರ ಮಧ್ಯರಾತ್ರಿ ಕೊನೆಗೊಳ್ಳಲಿದ್ದು, ಭರೋಬ್ಬರಿ 52ದಿವಸಗಳ ನಂತರ ಮೀನುಗಾರರು ಆಳಸಮುದ್ರ ಮೀನುಗಾರಿಕೆಗೆ ತೆರಳಲಿದ್ದಾರೆ. ನೂತನ ಮೀನುಗಾರಿಕಾ ಋತುವಿಗಾಗಿ ಮೀನುಗಾರರು ತಮ್ಮ ಬಲೆ, ದೋಣಿ ನವೀಕರಿಸಿಕೊಂಡಿದ್ದು, ಸಮುದ್ರಕ್ಕಿಳಿಯಲು ಸಜ್ಜಾಗಿದ್ದಾರೆ.
ಮೀನುಗಳ ಸಂತಾನೋತ್ಪತ್ತಿ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲಾವಧಿಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತಿದ್ದರೂ, ಕೇರಳದಲ್ಲಿ ಇದನ್ನು 52ದಿವಸಗಳಿಗೆ ಸೀಮಿತಗೊಳಿಸಲಾಗಿದೆ.
ಈ ಬಾರಿಯ ಮೀನುಗಾರಿಕಾ ನಿಷೇಧದ ಕಾಲಾವದಿಯಲ್ಲಿü ಮೀನಿಗೆ ಅತಿಯಾದ ಬರ ಕಾಡಿತ್ತು. ಕರಾವಳಿ ಜನತೆಯ ಅಗ್ಗದ ಹಾಗೂ ರುಚಿಕರವಾದ ಮೀನಿಗೆ ಹೆಸರುವಾಸಿಯಾಘಿದ್ದ ಬೂತಾಯಿಗೆ ಕಿಲೋ ಒಂದಕ್ಕೆ 400ರೂ ನೀಡಬೇಕಾಗಿಬಂದಿತ್ತು. ಪ್ರಾದೇಶಿಕವಾದ ಹೊಳೆ ಮೀನಿಗೂ ಕ್ಷಾಮ ಎದುರಾಗಿತ್ತು. ಈ ಬಾರಿ ಧಾರಾಕಾರ ಸುರಿದ ಮಳೆ ಸಮೃದ್ಧ ಮತ್ಸ್ಯೋತ್ಪಾದನೆ ಆಗಿರಬಹುದೆಂಬ ನಿರೀಕ್ಷೆಯೊಂದಿಗೆ ಮೀನುಗಾರರು ಕಡಲಿಗಿಳಿಯಲು ಸಜ್ಜಾಗುತ್ತಿದ್ದಾರೆ. ಮೀನಿನ ಬರ ಎದುರಾಗಿ ಕರಾವಳಿ ಜನತೆ ಹೆಚ್ಚಿನ ಸಮಸ್ಯೆ ಎದುರಿಸುವಂತಾಗಿತ್ತು. ಧಾರಾಳ ತಾಜಾ ಮೀನು ಲಭ್ಯವಾಗುವುದರ ಜತೆಗೆ ದರವೂ ಕಡಿಮೆಯಾಗುವ ವಿಶ್ವಾಸದೊಂದಿಗೆ ಗ್ರಾಹಕರೂ ಕಾದುಕುಳಿತಿದ್ದಾರೆ. ಟ್ರೋಲಿಂಗ್ ಕಾಲಾವಧಿಯಲ್ಲಿ ಸಿಗಡಿ ಮೀನು ಯಥೇಚ್ಛವಾಗಿ ಲಭ್ಯವಾಗುತ್ತಿದ್ದ ಹಿನ್ನೆಲೆಯಲ್ಲಿ ಮುಂದೆ ಸಿಗಡಿ ಮೀನಿನ ಸುಗ್ಗಿಯಾಗಬಹುದೆಂಬುದು ಮೀನುಗಾರರು ಹಾಗೂ ಗ್ರಾಹಕರ ನಿರೀಕ್ಷೆಯಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮಂಜೇಶ್ವರ, ಕಾಸರಗೋಡು ಕಸಬ, ಚೆರುವತ್ತೂರ್- ಮಡಕ್ಕರ ಎಂಬಲ್ಲಿ ಮೀನುಗಾರಿಕಾ ಬಂದರುಗಳಿದ್ದು, ಆ. 1ರಿಂದ ಮೀನುಗಾರಿಕಾ ಜೆಟ್ಟಿಗಳು ಮತ್ತೆ ಸಕ್ರಿಯಗೊಳ್ಳಲಿದೆ. ಮೀನುಗಾರಿಕೆಯನ್ನೇ ಆಶ್ರಯಿಸಿ ಜೀವನ ಸಾಗಿಸುತ್ತಿರುವ ಕರವಳಿಯ ಮೀನುಗಾರರಿಗೆ ಕಳೆದ ಎರಡು ತಿಂಗಳ ಕಾಲ ಮೀನುಲಭ್ಯವಾಗದೆ ಸಂಕಷ್ಟ ಎದುರಿಸುವಂತಾಗಿತ್ತು.




