ಜಮ್ಮು: ಕಳೆದ 36 ಗಂಟೆಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ನಿನ್ನೆ (ಗುರುವಾರ) ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೊನ್ನೆ ಗಂಡೇರ್‌ಬಲ್ ಜಿಲ್ಲೆಯ ಬಲ್ತಾಲ್ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ ಮಹಿಳಾ ಯಾತ್ರಿಕರೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದರು.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕಾಶ್ಮೀರ ವಿಭಾಗಿಯ ಪೊಲೀಸ್ ಆಯುಕ್ತ ವಿಜಯ್ ಕುಮಾರ್ ಭಿದೂರಿ, 'ಪಹಲ್ಗಾಮ್ ಮತ್ತು ಬಲ್ತಾಲ್ ಶಿಬಿರಗಳಿಂದ ಗುರುವಾರ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಭಾರಿ ಮಳೆಯಿಂದಾಗಿ ಎರಡೂ ಮಾರ್ಗಗಳಲ್ಲಿ ರಸ್ತೆ ಹದಗೆಟ್ಟಿದ್ದು, ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಅದಾಗ್ಯೂ ಪಂಜ್ತಾಮಿ ಶಿಬಿರದಲ್ಲಿ ತಂಗಿದ್ದ ಯಾತ್ರಿಕರಿಗೆ ಬಿಆರ್‌ಒ ಮತ್ತು ಪರ್ವತ ರಕ್ಷಣಾ ತಂಡಗಳು ಸಾಕಷ್ಟು ನಿಯೋಜನೆಯೊಂದಿಗೆ ಇಳಿಯಲು ಅವಕಾಶ ನೀಡುತ್ತಿದೆ' ಎಂದು ತಿಳಿಸಿದ್ದಾರೆ.
ಹವಾಮಾನ ಅಧರಿಸಿ ಶುಕ್ರವಾರದಿಂದ ಯಾತ್ರೆಯನ್ನು ಮತ್ತೆ ಆರಂಭಿಸಲಾಗುವುದು. ಈ ವರ್ಷ ಇದೇ ಮೊದಲ ಬಾರಿಗೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದೂ ಅವರು ವಿವರಿಸಿದ್ದಾರೆ.
ಜುಲೈ 3ರಿಂದ ಆರಂಭವಾದ ಯಾತ್ರೆಯಲ್ಲಿ ಈವರೆಗೆ 2.47 ಲಕ್ಷ ಭಕ್ತರು ಶಿವನ ದರ್ಶನ ಪಡೆದಿದ್ದಾರೆ. ಆಗಸ್ಟ್ 9ಕ್ಕೆ ಯಾತ್ರೆ ಮುಕ್ತಾಯಗೊಳ್ಳಲಿದೆ.




