HEALTH TIPS

ಸವಾಲುಗಳ ಮಧ್ಯೆ ಕಿರಿಯ ಪ್ರಾಥಮಿಕ ಸಂಸ್ಕøತ ಕಲಿಕೆ-ವಿದ್ಯಾರ್ಥಿಗಳು ಕಂಗಾಲು

ಕುಂಬಳೆ: ಶಿಕ್ಷಣ ಕ್ಷೇತ್ರದಲ್ಲಿ ಕೇರಳ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆಗಳನ್ನು ದಾಖಲಿಸುತ್ತಿದೆ ಎಂದು ಸರ್ಕಾರ ಆಗಾಗ್ಗೆ ಹೇಳುತ್ತಿದ್ದರೂ ಇತ್ತೀಚೆಗಿನ ವ್ಯಾಪಕ ಅಪಸವ್ಯಗಳು ಈ ವಾದಗಳನ್ನು ತಪ್ಪೆಂದು ಹೇಳುತ್ತಿದೆ. ಕಳೆದ ಕೆಲವು ವರ್ಷಗಳಿಂದ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ಹಲವು ನೀತಿಗಳು ವ್ಯಾಪಕ ಪ್ರಮಾಣದ ಸವಾಲುಗಳಿಗೆ ಕಾರಣವಾಗುತ್ತಿದೆ. ಇದಲ್ಲಿ ಮುಖ್ಯವಾಗಿ ಇದೀಗ ಎತ್ತಿ ತೋರಿಸಬೇಕಾದ್ದು ಪ್ರಾಥಮಿಕ ಹಂತದ ಸಂಸ್ಕøತ ಶಿಕ್ಷಕರ ಕೊರತೆ.

ಇತರೆಡೆಗಳಿಗಿಂತ ವಿಒಶಿಷ್ಟವಾಗಿ ಕೇರಳದಲ್ಲಿ ಸಂಸ್ಕøತ ಭಾಷಾ ಕಲಿಕೆಗೆ ಉತ್ತೇಜನ ಹೆಚ್ಚಿದೆ. ಆದರೆ, ಕಳೆದ ಹಲವು ವರ್ಷಗಳಿಂದ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಸಂಸ್ಕøತ ಶಿಕ್ಷಕರನ್ನು ನೇಮಿಸದೆ ಕಲಿಕೆಯ ಹಕ್ಕನ್ನು ಆಡಳಿತ ವರ್ಗ ಕಸಿದಿದೆ. 

ಕಾಸರಗೋಡು ಶಿಕ್ಷಣ ಜಿಲ್ಲೆಯಲ್ಲಿ 60 ಕಿರಿಯ ಪ್ರಾಥಮಿಕ ಶಾಲೆಗಳಲ್ಲಾಗಿ 3000 ವಿದ್ಯಾರ್ಥಿಗಳು ಕಳೆದ 15 ವರ್ಷಗಳಿಂದ ಈ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇರಳ ರಾಜ್ಯದಾತ್ಯಂತವೂ ಇದೇ ಪರಿಸ್ಥಿತಿ ಇದೆ.


2010ರಲ್ಲಿ ಅಂದಿನ ಯುಡಿಎಫ್ ಸರ್ಕಾರ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಅಧಿಕಾರಾವಧಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಂಸ್ಕøತ ಕಲಿಕೆಗೆ ಅವಕಾಸ ನೀಡಿ ಆದೇಶ ಹೊರಡಿಸಿತ್ತು. ಆದರೆ ಆ ವೇಳೆ ಸರ್ಕಾರಕ್ಕೆ ಯಾವುದೇ ಆರ್ಥಿಕ ಬಾಧ್ಯತೆಗಳಾಗದಂತೆ ಸರ್ಕಾರ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ಸಂಸ್ಕøತ ಶಿಕ್ಷಕರೇ ಕಿರಿಯ ಪ್ರಾಥಮಿಕ ತರಗತಿಗಳಿಗೆ ಸಂಸ್ಕøತ ಬೋಧಿಸುತ್ತಿದ್ದಾರೆ. ಆದರೆ, ಅಧ್ಯಾಪಕರಿಗೆ ಈ ನಿಟ್ಟಿನಲ್ಲಿ ಹೆಚ್ಚುವರಿ ಯಾವುದೇ ವೇತನ ಹೆಚ್ಚಳವಾಗಲಿ, ಹಿರಿತನದ ನೆರವುಗಳಾಗಲಿ ಲಭ್ಯವಾಗುತ್ತಿಲ್ಲ. 

ಇಲ್ಲದವರಿಗೆ ಇಲ್ಲ:

ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೇ ಕಿರಿಯ ಪ್ರಾಥಮಿಕ ಶಾಲೆಗಳಿಗೂ ಸಂಸ್ಕøತ ಬೋಧಿಸಬೇಕೆಂಬ ಸರ್ಕಾರದ ನಿಯಮದ ಹಿನ್ನೆಲೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲದ ಕೇವಲ ಕಿರಿಯ ಪ್ರಾಥಮಿಕ ಮಾತ್ರವಿರುವ ಶಾಲೆಗಳಲ್ಲಿ ಸಂಸ್ಕøತ ಕಲಿಕೆಗೆ ಅವಕಾಶ ವಂಚಿತವಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಕಿರಿಯ ಪ್ರಾಥಮಿಕ ತರಗತಿಗಳಿರುವ ಶಾಲೆಗಳಿದ್ದು, ಆಸಕ್ತ ವಿದ್ಯಾರ್ಥಿಗಳಿದ್ದೂ ಅವರಿಗೆ ಸಂಸ್ಕøತ ಬೋಧನೆಗೆ ವ್ಯವಸ್ಥೆಗಳಿಲ್ಲ. ಇದರಿಂದ ಹಲವು ಪೋಷಕರು ಕಿರಿಯ-ಹಿರಿಯ ಪ್ರಾಥಮಿಕ ಜೊತೆಜೊತೆಗಿರುವ ಶಾಲೆಗಳಿಗೆ ಮಕ್ಕಳನ್ನು ಕಳಿಸುವ ಒತ್ತಡಕ್ಕೊಳಗಾಗುತ್ತಿದ್ದು, ಕಿರಿಯ ಪ್ರಾಥಮಿಕ ತರಗತಿಗಳು ಮಾತ್ರವಿರುವ ಶಾಲೆಗಳ ಮಕ್ಕಳ ಸಂಖ್ಯಾ ಕುಸಿತಕ್ಕೂ ಇದು ಕಾರಣವಾಗಿರುವುದಾಗಿ ದೂರುಗಳಿವೆ.

ಅವರಿಗಿದೆ, ಇವರಿಗಿಲ್ಲ:

ಕಾಸರಗೋಡು ಸಹಿತ ರಾಜ್ಯದಾದ್ಯಂತ ಹೆಚ್ಚಿನ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಈಗಾಗಲೇ ಅರಬಿ, ಉರ್ದು ಬೋಧಕರ ಪೂರ್ಣಾವಧಿ ಶಿಕ್ಷಕರನ್ನು ನೇಮಿಸುವ ಶಿಕ್ಷಣ ಕಾನೂನು ಜಾರಿಯಲ್ಲಿದೆ. ಹಾಗಿದ್ದೂ, ಮಕ್ಕಳ ಸಾಕಷ್ಟು ಲಭ್ಯತೆಯ ಹೊರತಾಗಿಯೂ ಸಂಸ್ಕøತ ಬೋಧಕರನ್ನು ಕಿರಿಯ ಪ್ರಾಥಮಿಕ ಶಾಲೆಗಳಿಗೆ ನೇಮಿಸದಿರುವುದು ಪ್ರಶ್ನಾರ್ಹವಾಗಿದೆ. ಸ್ಕಾಲರ್ ಶಿಫ್ ಪರೀಕ್ಷೆಗಳು, ಪಠ್ಯಪುಸ್ತಕಗಳು, ಪರೀಕ್ಷೆಗಳು ಇವೆಲ್ಲ ಕಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಲಭ್ಯವಿದ್ದರೂ, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರೇ ಕಿರಿಯ ಪ್ರಾಥಮಿಕ ವರ್ಗಕ್ಕೂ ಬೋಧಿಸಬೇಕಾಗಿರುವುದು ಶಿಕ್ಷಕರಿಗೆ ಹೆಚ್ಚಿನ ಒತ್ತಡ, ಗೊಂದಲಗಳಿಗೆ ಕಾರಣವಾಗುತ್ತಿರುವ ಬಗ್ಗೆ ದೂರಲಾಗಿದೆ. 

ಅಭಿಮತ

-2010 ರಿಂದ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಂಸ್ಕøತ ಬೋಧನೆಗೆ ಅವಕಾಶ ನೀಡಲಾಗಿದ್ದರೂ, ಈವರೆಗೆ ಶಿಕ್ಷಕರ ನೇಮಕಾತಿ ನಡೆದಿಲ್ಲ. ಕಿರಿಯ ಪ್ರಾಥಮಿಕದಲ್ಲಿ ವರ್ಷದಿಂದ ವರ್ಷಕ್ಕೆ ಸಂಸ್ಕøತ ಕಲಿಕೆಗೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು, ಇದು ಹಿರಿಯ ಪ್ರಾಥಮಿಕ ಶಿಕ್ಷಕರನ್ನು ತೀವ್ರ ಒತ್ತಡದಲ್ಲಿರುವಂತೆ ಮಾಡಿದೆ. ಈಗಾಗಲೇ ಸರ್ಕಾರದ ಪ್ರತಿನಿಧಿಗಳೊಂದಿಗೆ ಹಲವು ಬಾರಿ ಸ್ಥಿರ ನೇಮಕಾತಿಗೆ ಒತ್ತಾಯಿಸಲಾಗುತ್ತಿದ್ದರೂ ಯಾವುದೇ ಸಕಾರಾತ್ಮಕ ಭರವಸೆಗಳು ಲಭಿಸಿಲ್ಲ. ಇದರಿಂದ ಸಮಸ್ಯೆ ಜಟಿಲಗೊಳ್ಳುತ್ತಿದೆ. ಇದೇ ಕ್ರಮ ಮುಂದುವರಿದರೆ ನ್ಯಾಯಾಲಯದ ಮೊರೆ ಹೋಗಲಾಗುವುದು.

-ಮಧು ಕೆ.

ಕೇರಳ ರಾಜ್ಯ ಸಂಸ್ಕøತ ಅಧ್ಯಾಪಕ ಪರಿಷತ್ತು ರಾಜ್ಯ ಸಮಿತಿ ಸದಸ್ಯ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries