ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ಜು. 28ರ ವರೆಗೂ ಗಾಳಿಯಿಂದ ಕೂಡಿದ ಮಳೆಯಾಗುವ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿರುಸಿನ ಗಾಳಿಯಿಂದ ಕೂಡಿದ ಮಳೆಗೆ ಜಿಲ್ಲೆಯ ವಿವಿಧೆಡೆ ಹಾನಿ ಉಂಟಾಗಿದೆ. ತಾಸಿಗೆ 50ರಿಂದ 60ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಜನರು ಜಾಗ್ರತೆ ಪಾಳಿಸುವಂತೆ ಸೂಚಿಸಲಾಘಿದೆ.
ಈ ಮಧ್ಯೆ ಭೂಕುಸಿತ ಉಂಟಾಗಿರುವ ಚೆರುವತ್ತೂರಿನ ವೀರಮಲೆಬೆಟ್ಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಯಂತ್ರಣ ಮುಂದುವರಿದಿದ್ದು, ಕಾಞಂಗಾಡ್‍ನಿಂದ ಚೆರುವತ್ತೂರು ಪಯ್ಯನ್ನೂರಿಗೆ ಹೋಗುವ ವಾಹನಗಳು ನೀಲೇಶ್ವರಂ ರಾಷ್ಟ್ರೀಯ ಹೆದ್ದಾರಿಯಿಂದ ಕೊಟ್ಟಪುರ-ಮಡಕ್ಕರ ಮಾರ್ಗವಾಗಿ ಸಂಚರಿಸಿ ಚೆರುವತ್ತೂರು ರಾಷ್ಟ್ರೀಯ ಹೆದ್ದಾರಿ ಸಾಗುತ್ತಿದೆ. ಪಯ್ಯನ್ನೂರಿನಿಂದ ನೀಲೇಶ್ವರಂ-ಕಾಞಂಗಾಡ್ ಕಡೆಗೆ ಸಾಗುವ ವಾಹನಗಳು ಕೊತ್ತಾಯಿ ಮುಕ್ಕು-ಕಾಂಕೋಲ್-ಚಿಮೇನಿ ಕಯ್ಯೂರ್-ಚಯೋತ್ ಮೂಲಕ ನೀಲೇಶ್ವರ ರಾಷ್ಟ್ರೀಯ ಹೆದ್ದಾರಿಯನ್ನು ತಲುಪಬೇಕಾಗಿದೆ.
ಮರ ಬಿದ್ದು ಹಾನಿ:
ರಾಜ್ಯ ಹೆದ್ದಾರಿಯ ಚಾಮುಂಡಿಕ್ಕುನ್ನು ಎಂಬಲ್ಲಿ ಭಾರೀ ಗಾತ್ರದ ಮರ ಉರುಳಿದ ಪರಿಣಾಮ ಕಾಸರಗೋಡಿನ ಪತ್ರಕರ್ತ ರವೀಂದ್ರನ್ ರಾವಣೇಶ್ವರ ಎಂಬವರ ಕಾರು ಹಾನಿಗೀಡಾಗಿದೆ. ಮರುರುಳಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.


