ಕಾಸರಗೋಡು: ಬಿರುಸಿನ ಮಳೆ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ನಡೆಯಿತು. ಭೂಕುಸಿತ ಸಂಭವಿಸುವ ಪ್ರದೇಶಗಳಲ್ಲಿ ತೀವ್ರ ಜಾಗರೂಕತೆ ವಹಿಸುವಂತೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನಿರ್ದೇಶನ ನೀಡಿದರು. ಅಪಾಯದಲ್ಲಿರುವ ಕುಟುಂಬಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಆಯಾ ತಾಲೂಕಿನ ತಹಸೀಲ್ದಾರ್‍ಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಗ್ರಾಮಾಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆಯುತ್ತಿರುವ ವೀರಮಲೆ ಬೆಟ್ಟ, ಮಟ್ಟಾಲೈ ಕುನ್ನು, ಬೇವಿಂಜ ತೆಕ್ಕಿಲ್ ಕುನ್ನು, ವೆಳ್ಳರಿಕುಂಡು ತಾಲ್ಲೂಕಿನ ಗುಡ್ಡಗಾಡು ಪ್ರದೇಶಗಳು ಮತ್ತು ಕಲ್ಲಾರ್ ಪ್ರದೇಶದಲ್ಲಿ ಭೂಕುಸಿತಕ್ಕೆ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಈ ಪ್ರದೇಶದ ಜನತೆ ಎಚ್ಚರಿಕೆ ವಹಿಸಬೇಕು.
ಸಮುದ್ರ ಕೊರೆತಕ್ಕೆ ಒಳಗಾಗುವ ಪ್ರದೇಶಗಳಲ್ಲಿ ನೀರಾವರಿ ಇಲಾಖೆಯು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಸಮುದ್ರ ಕೊರೆತಕ್ಕೆ ಒಳಗಾಗುವ ಪ್ರದೇಶಗಳಲ್ಲಿ ರಕ್ಷಣಾ ನಿರ್ಮಾಣ ಕಾರ್ಯಗಳಿಗೆ ಅಂದಾಜು ವೆಚ್ಚದೊಂದಿಗೆ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮೇಜರ್ ಇರಿಗೇಶನ್ ಕಾರ್ಯಪಾಲಕ ಅಭಿಯಂತರರು ಸೂಚಿಸಿದರು.


