ಬದಿಯಡ್ಕ: ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಸಂಪರ್ಕದ ರಸ್ತೆಯ ಬದಿಯಡ್ಕ ಸನಿಹದ ಪಳ್ಳತ್ತಡ್ಕದಲ್ಲಿ ಉಂಟಾಗಿರುವ ಬೃಹತ್ ಹೊಂಡಗಳನ್ನು ಮುಚ್ಚುವ ಕೆಲಸಕ್ಕೆ ಲೋಕೋಪಯೋಗಿ ಇಲಾಖೆ ಇನ್ನೂ ಮುಂದಾಗಿಲ್ಲ. ಈ ಪ್ರದೇಶದಲ್ಲಿ ಸುಮಾರು 200ಮೀ. ಉದ್ದಕ್ಕೆ ರಸ್ತೆಯಲ್ಲಿ ಉಂಟಾಗಿರುವ ಹೊಂಡಗಳಲ್ಲಿ ಆಟೋರಿಕ್ಷಾ, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಭಾರಿ ಗಾತ್ರದ ಟೋರಸ್ ವಾಹನಗಳ ಚಾಲಕರೇ ಇಲ್ಲಿ ಹರಸಾಹಸಪಡುತ್ತಿದ್ದು, ಇನ್ನು ಸಣ್ಣ ವಾಹನಗಳ ಚಾಲಕರು ರಸ್ತೆಯಲ್ಲಿ ಪಡುವ ಪಾಡು ಅಷ್ಟಿಷ್ಟಲ್ಲ. ಈ ಪ್ರದೇಶದ ಜನತೆ ರಸ್ತೆಯಲ್ಲಿ ಉಂಟಾಗಿದ್ದ ಹೊಂಡದ ನೀರಲ್ಲಿ ಈಜುವುದು, ರಸ್ತೆ ಹೊಮಡದಲ್ಲಿ ಬಾಳೆಗಿಡ ನೆಡುವುದು ಸೇರಿದಂತೆ ವಿವಿಧ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ರಸ್ತೆಯಲ್ಲಿನ ಹೊಂಡದಲ್ಲಿ ತುಂಬಿಕೊಂಡಿದ್ದ ನೀರಿನಲ್ಲಿ ಈಜಾಡುವ ಹಾಗೂ ನೀರನ್ನು ಮೈಮೇಲೆ ಸುರಿದುಕೊಳ್ಳುವ ಮೂಲಕ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ನೇತೃತ್ವದಲ್ಲಿ ನಡೆದ ವಿಶಿಷ್ಟ ರೀತಿಯ ಪ್ರತಿಭಟನೆ ಕೂಡಾ ಅಧಿಕಾರಿಗಳ ಕಣ್ಣು ತೆರೆಸಲಾಗಿಲ್ಲ. ಇನ್ನು ರಸ್ತೆ ನಡುವಿನ ಹೊಂಡದಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟಿಸಿದರೂ, ಇಲಾಖೆ ಜಪ್ಪೆನ್ನುತ್ತಿಲ್ಲ.
ಪಳ್ಳತ್ತಡ್ಕದಲ್ಲಿ ಕಳೆದ ಹಲವು ವಚರ್ಷಗಳಿಂದಲೂ ರಸ್ತೆ ಶಿಥಿಲಗೊಳ್ಳುತ್ತಿದ್ದರೂ, ಇದಕ್ಕೆ ಕಾಯಂಪರಿಹಾರ ಕಂಡುಕೊಳ್ಳುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ. ವಿಪರ್ಯಾಸವೆಂದರೆ, ಇಲ್ಲಿ ರಸ್ತೆ ಅಂಚಿಗೆ ನೀರು ಹರಿಯುವ ಚರಂಡಿಯ ಹೂಳು ತೆಗೆಯುವಲ್ಲೂ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿರುವುದು ರಸ್ತೆಯಲ್ಲಿ ನೀರು ಹರಿಯಲು ಪ್ರಮುಖ ಕಾರಣವಾಗುತ್ತಿದೆ.
ವರ್ಷಗಳ ಹಿಂದೆಯಷ್ಟೆ ಚೆರ್ಕಳದಿಂದ ಅಡ್ಕಸ್ಥಳ ವರೆಗೆ ಮರುಡಾಂಬರೀಕರಣದಂದಿಗೆ ರಸ್ತೆಯನ್ನು ತರಾತುರಿಯಿಂದ ಅಭಿವೃದ್ಧಿಗೊಳಿಸಲಾಗಿತ್ತು. ಚೆರ್ಕಳದಿಂದ ಉಕ್ಕಿನಡ್ಕ ವರೆಗಿರುವ ರಸ್ತೆ ಒಬ್ಬ ಗುತ್ತಿಗೆದಾರನಿಗೆ ಟೆಂಡರ್ ನೀಡಿದ್ದರೆ, ಅಲ್ಲಿಂದ ಮುಂದೆ ಅಡ್ಕಸ್ಥಳ ವರೆಗೆ ಇನ್ನೊಬ್ಬ ಗುತ್ತಿಗೆದಾರಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಆದರೆ, ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ಕಾಮಗಾರಿಯ ಅಂತಿಮ ಹಂತದ ಕೆಲಸಕಾರ್ಯ ಇನ್ನೂ ಪೂರ್ಣಗೊಳಿಸಿಲ್ಲ. ಇದರಿಂದ ಪಳ್ಳತ್ತಡ್ಕ ಪ್ರದೇಶದಲ್ಲಿ ಪ್ರತಿವರ್ಷ ರಸ್ತೆಯಲ್ಲಿ ಭಾರಿ ಪ್ರಮಾಣದ ಹೊಂಡಗಳುಂಟಾಗುತ್ತಿದ್ದು, ಇದಕ್ಕೆ ತೇಪೆ ಹಚ್ಚುವ ಕೆಲಸ ಮಾತ್ರ ನಡೆಯುತ್ತಿದೆ. ಇಲ್ಲಿ ರಸ್ತೆ ಅಂಚಿಗೆ ಸೂಕ್ತ ಚರಂಡಿ ನಿರ್ಮಿಸುವುದರ ಜತೆಗೆ ಭಾರಿ ಪ್ರಮಾಣದಲ್ಲಿ ಹರಿದು ಬರುವ ಮಳೆನೀರನ್ನು ರಸ್ತೆಗೆ ಹರಿಯದಂತೆ ತಡೆಗೋಡೆ ನಿರ್ಮಿಸಬೇಕಾದ ಅಗತ್ಯವಿದೆ. ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ರಸ್ತೆ ಎಡನೀರು, ನೆಕ್ರಾಜೆ, ಚೆಡೆಕ್ಕಲ್, ಕರಿಂಬಿಲ, ಪಳ್ಳತ್ತಡ್ಕ ಸೇರಿದಂತೆ ವಿವಿಧೆಡೆ ಸಂಪೂರ್ಣ ಹದಗೆಟ್ಟಿದೆ. ಕೆಲಸ ಪೂರೈಸದ ಗುತ್ತಿಗೆದಾರರ ಬಗ್ಗೆ ಮೃದುಧೋರಣೆ ತಳೆಯುತ್ತಿರುವ ಇಲಾಖೆ, ರಸ್ತೆ ಶಿಥಿಲಾವಸ್ಥೆ ಬಗ್ಗೆಯೂ ಚಕಾರವೆತ್ತುತ್ತಿಲ್ಲ.
ಅಭಿಮತ:
ಚೆರ್ಕಳ-ಕಲ್ಲಡ್ಕ ರಸ್ತೆಯ ಪಳ್ಳತ್ತಡ್ಕದಲ್ಲಿ ರಸ್ತೆ ಶಿಥಿಲಾವಸ್ಥೆ ಬಗ್ಗೆ ಇಲಾಖೆ ಗಮನಹರಿಸಿದ್ದು, ಇಲ್ಲಿನ ಹೊಂಡಗಳನ್ನು ಮುಚ್ಚುವ ಕಾರ್ಯ ಶೀಘ್ರ ನಡೆಯಲಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಪೂರ್ಣಪ್ರಮಾಣದಲ್ಲಿ ರಸ್ತೆ ದುರಸ್ತಿಕಾರ್ಯ ಕೈಗೆತ್ತಿಕೊಲ್ಳಲಾಗುವುದು.
ಸಿ.ಜೆ ಕೃಷ್ಣನ್ ಮುಖ್ಯ ಅಭಿಯಂತರು
ಲೋಕೋಪಯೋಗಿ ಇಲಾಖೆ, ರಸ್ತೆ ವಿಭಾಗ(ಕಿಫ್‍ಬಿ)



