HEALTH TIPS

ಎಡನೀರಲ್ಲಿ ಕುಂಬಳೆ ಶ್ರೀಧರ ರಾವ್ ಸ್ಮರಣಾಂಜಲಿ-ದಾಸಪ್ಪ ರೈಗಳಿಗೆ ಸ್ಮತಿ ಗೌರವ ಪ್ರದಾನ

ಬದಿಯಡ್ಕ: ಸಮಾಜವನ್ನು ಒಂದಾಗಿ ಹಿಡಿದಿಟ್ಟುಕೊಳ್ಳುವ ಏಕೈಕ ಕಲೆ ಯಕ್ಷಗಾನ ಕೇವಲ ಮನೋರಂಜನೆಯಷ್ಟೇ ಅಲ್ಲದೆ ಅದು ಬೌದ್ಧಿಕ ವಿಕಾಸ, ಜೀವನ ಮೌಲ್ಯಗಳ ಕಲಿಕೆಯ ಮಾರ್ಗದರ್ಶಿ ಕಲೆ. ಮೇರು ಕಲಾವಿದರಾಗಿದ್ದ ದಿ.ಶ್ರೀಧರ ರಾಯರ ಬಗ್ಗೆ ಗೌರವ, ಪ್ರೀತಿಗಳಿಂದ ಅಭಿಮಾನಿಗಳು ಅವರನ್ನು ಗುರುತಿಸುತ್ತಿದ್ದರು. ಶ್ರೀಎಡನೀರು ಮಠ ಮತ್ತು ಶ್ರೀಧರ ರಾಯರಿಗೆ ಅವಿನಾಭಾವ ಸಂಬಂಧವಿತ್ತು ಎಂದು ಪುತ್ತೂರು ವಿವೇಕಾನಂದ ಪದವಿ ಕಾಲೇಜು ಆಡಳಿತ ಸಮಿತಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ತಿಳಿಸಿದರು.

ಶ್ರೀಮದ್ ಎಡನೀರು ಮಠದಲ್ಲಿ ಭಾನುವಾರ ಸಂಜೆ ನಡೆದ ಹಿರಿಯ ಯಕ್ಷಗಾನ ಕಲಾವಿದ ಕೀರ್ತಿಶೇಷ ಕುಂಬಳೆ ಶ್ರೀಧರ ರಾವ್ ಅವರ ನೆನಪಲ್ಲಿ ಆಯೋಜಿಸಲಾಗಿದ್ದ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಶ್ರೀಧರ ರಾವ್ ಅವರ ಕಲೆ-ಜೀವನ ಪಥಗಳನ್ನು ನೆನಪಿಸಿ ಅವರು ಮಾತನಾಡಿದರು.


ಕಲಾವಿದರು ನೀಡಿದ ಜೀವಮಾನ ಕೊಡುಗೆ ಅಮೂಲ್ಯವಾದುದಾಗಿದ್ದು, ಪ್ರತಿಫಲವಾಗಿ ಸಮಾಜ ಮರಳಿ ನೀಡುವ ಕೊಡುಗೆ ಗೌಣವಾದುದು. ಈ ನಿಟ್ಟಿನಲ್ಲಿ ಅವರಿಗೆ ಸಲ್ಲಿಸುವ ಗೌರವಾಭಿನಂದನೆಗಳು, ಸ್ಮರಣೆಗಳು ಪೂರಕವಾದುದು. ಸಾಗಿಬಂದ ದಾರಿ, ವ್ಯಕ್ತಿಗಳ ಸಾಧನಾ ಪಥಗಳ ದಾಖಲೀಕರಣಗಳು ಮಹತ್ತರವಾದುದು. ಆ ನಿಟ್ಟಿನ ಕೆಲಸಗಳಾಗಬೇಕು ಎಂದವರು ನೆನಪಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಪೂಜ್ಯ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಪೂರ್ವಾಶ್ರಮದಲ್ಲೇ ದಿ.ಶ್ರೀಧರ ರಾಯರ ಒಡನಾಟದ ಬಗ್ಗೆ ಸ್ಮರಿಸಿ, ಹಿರಿಯ ಶ್ರೀಗಳೊಂದಿಗಿನ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಶ್ರೀಧರ ರಾಯರು ಇಷ್ಟುಬೇಗ ಕಲಾಕ್ಷೇತ್ರವನ್ನು ಅಗಲಿರುವುದು ಅನಿರೀಕ್ಷಿತ. ಕಾಡುವ ಶ್ರೀಧರ ರಾಯರ ನೆನಪುಗಳ ಇಂತಹ ಕಾರ್ಯಕ್ರಮ ಪ್ರಸ್ತುತ. ಮಠದೊಂದಿಗೆ ನಿಕಟರಾಗಿದ್ದ ಅವರ ಕಲಾಸೇವೆ ಮಹತ್ತರವಾದುದು ಎಂದು ತಿಳಿಸಿದರು.  


ಈ ಸಂದರ್ಭ ಹಿರಿಯ ಕಲಾವಿದ ಕೆ.ಎಚ್.ದಾಸಪ್ಪ ರೈ ಅವರಿಗೆ ಕುಂಬಳೆ ಸ್ಮøತಿ ಗೌರವ ಪ್ರದಾನಗೈದು ಸನ್ಮಾನಿಸಲಾಯಿತು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಂಚಾಲಕ, ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ಕುಂಬಳೆ ಕಣಿಪುರ ಶ್ರೀಕ್ಷೇತ್ರದ ವ್ಯವಸ್ಥಾಪಕ ವೆಂಕಟಕೃಷ್ಣ ಹಿಳ್ಳೆಮನೆ, ಪತ್ರಕರ್ತ ನಾ.ಕಾರಂತ ಪೆರಾಜೆ ಅವರನ್ನು ಗೌರವಿಸಲಾಯಿತು. ದಿ.ಶ್ರೀಧರ ರಾವ್ ಅವರ ಪತ್ನಿ ಕೆ.ಸುಲೋಚನಾ, ಪುತ್ರರಾದ ಕೃಷ್ಣ ಪ್ರಸಾದ್ ಹಾಗೂ ದೇವಿ ಪ್ರಸಾದ್ ಉಪಸ್ಥಿತರಿದ್ದರು. 

ಶ್ರೀಧರ ರಾಯರ ಸಹೋದರ ಗೋಪಾಲ ಕುಂಬಳೆ ಸ್ವಾಗತಿಸಿ, ಶ್ರೀಧರ ರಾಯರ ಪುತ್ರ ಪುತ್ರ ಗಣೇಶ್ ಪ್ರಸಾದ್ ಕುಂಬಳೆ ವಂದಿಸಿದರು. ಡಾ.ಸತೀಶ್ ಪುಣಿಚಿತ್ತಾಯ,ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 2 ರಿಂದ ಶ್ರೀಧರ್ಮಸ್ಥಳ ಮೇಳದ ದಿ.ಶ್ರೀಧರ ರಾವ್ ಅವರ ಒಡನಾಡಿ ಕಲಾವಿದರಿಂದ ಚಕ್ರವ್ಯೂಹ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಬಳಿಕ ದಮಯಂತಿ ಪುನಃ ಸ್ವಯಂವರ ಯಕ್ಷಗಾನ ಪ್ರದರ್ಶನ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries